Wednesday, 12 June 2013

ಆಂತರ್ಯ

















ನಿನ್ನಂಗೈಯ್ಯ ಸೂರಿನಡಿ ಆಣೆಯನು 
ಹೊರುವ ಭಾರ ಅದು ಹೂವಿಗೂ ಹಗುರ 
ನಿನ್ನಾಧರದ ಮಾತಿನ ವೀಣೆಯನು 
ನುಡಿಸಲು ಹೊಮ್ಮುವ ಧನಿ ಜೆನಿಗೂ ಮಧುರ 
ನಿನ್ನಾಟಕೆ ಸೋಲುವ ಗೀಳನು ಅರಿತು 
ಗೆಲ್ಲಿಸುವ ನೀ ಭಾರಿ ಚತುರ 
ಕಪ್ಪು ಬಡ ಮುಗಿಲಿನ ಒಡೆತಿ ನಾನು 
ನೀ ನನ್ನ ಮನದಂಗಳದ ಚಂದಿರ 

ಒಂಟಿ ನಾನಿರಲು ನೀ ನೆನಪಾಗಿ ಗೀಚುವ
ಚಿತ್ತಾರದೊಳಗೆ ನೀ ಮೂಡಿ ಬರುವೆ 
ಅತಿಯಾದ ಯಾತನೆಗೆ ಕಣ್ತುಂಬಿಕೊಂಡಾಗ 
ಜೀವ ತಾಳುತ ಕೆನ್ನೆ ಸವರಿ ಬಿಡುವೆ 
ಒದ್ದೆ ತಲೆ ಕೂದಲನು ವೋರೆಸುತ್ತ ನಾನಿರಲು 
ಕದ್ದು ಜಾರುವೆ ನನ್ನ ಎದೆ ಗೂಡಿಗೆ 
ಎಷ್ಟು ತೀಡಿದರು ಕಡಿಮೆಯೇ 
ನಿನ್ನ ಕಂಡೊಡನೆ ಕರಗುವುದು ಕಣ್ಗಾಡಿಗೆ 

ಹೇಳಿಕೊಟ್ಟೆಯಾ ಕನ್ನಡಿಗೆ ರಸಿಕತೆಯ?
ಸೆಳೆದು ಬಿಟ್ಟುಕೊಡಲು ಸತಾಯಿಸಿದೆ 
ನಾ ಮರೆತ ಹಣೆ ಬೊಟ್ಟು ತನ್ನಲ್ಲಿ ಇರಿಸಿ 
ಸಿಂಗಾರಕೆ ಒಲಿದು ಸಹಕರಿಸಿದೆ 
ಮುಂಗುರುಳಿಗೂ ನಿನ್ನ ತುಂಟತನ ತಿಳಿದಿದೆ 
ನೀ ಕಂಡೊಡನೆ ಸರಿಯುವುದು ಕಿವಿ ಮರೆಗೆ 
ತುಟಿಯ ರಂಗಿಗೆ ತವಕದಲಿ ಹುಚ್ಚು ಹಿಡಿದಿದೆ 
ನಿನ್ನ ಹೆಸರಲಿ ಅಳಿಸಿ ಹೋಗುವ ವರೆಗೆ 

ಹೆಜ್ಜೆ ಗುರುತುಗಳೆಲ್ಲೂ ಉಳಿದಿಲ್ಲ ದಾರಿಯಲಿ 
ನೀ ಸಿಕ್ಕಿದೆಡೆಯೇ ಸಭೀಕರಿಸಿವೆ 
ಘಮದ ಮಲ್ಲೆಯ ದಿಂಡು ನೀ ಮುಡಿಯೇರಿಸಲು 
ಮಡಿದ ಆಸೆಗಳೂ ನವೀಕರಿಸಿವೆ 
ನನ್ನ ಕಿರು ಬೆರಳಿಗೆ ಒಂಟಿತನದ ಕೊರಗು 
ಕೊಂಡಿಯಾಕಾರದಲಿ ಮುಂದಾಗಿದೆ 
ಎಲ್ಲೇ ಇದ್ದರೂ, ನೀ ಕಾಣದೇ ಹೋದರೂ 
ಚಾಚಿದ ಕೈಗೆ ಸಿಗಬಾರದೇ?

ಪೋಲಿ ಸೂರ್ಯನು, ಸುಮ್ಮನೆ ಬೆವರಿಳಿಸಿದ 
ಆದರೂ ನಿನ್ನ ಪಾಲನು ಕಾಯ್ದಿರಿಸಿದೆ 
ಬಂಧ ಮುಕ್ತಿಯ ನೀಡು ನನ್ನೆಲ್ಲಾ ನಾಳೆಗಳು 
ನಿನಗಾಗಿ ಮೈನೆರೆದು ಕಾಯುತ್ತಿದೆ 
ನೀನೊಬ್ಬ, ನಾನೊಬ್ಬಳು ಈ ಜಗದೊಳಗೆ 
ನಮ್ಮೊಳಗೆ ನಾವು ಒಂದೇ ಅಲ್ಲವೇ?!!
ನಿನ್ನ ಹೊಂಗಿರಣದ ತಿಳಿ ಸ್ಪರ್ಶ ಸಲುವಿಗೆ 
ಇಂಗದ ಇಬ್ಬನಿಯ ಹಾಗೆ ಕಾಯುವೆ ........... 

                                          --ರತ್ನಸುತ 

1 comment:

  1. ತುಂಬಾ ಮಾರ್ಮಿಕವಾದ ಕವನ. ಎನಿತು ಹೊಗಳಿದರೂ ಸಾಲದು ಪದ ಲಾಲಿತ್ಯಕ್ಕೆ. ನೀವೇ ಬರೆದುಕೊಂಡಂತೆ "ಬಂಧ ಮುಕ್ತಿಯ ನೀಡು ನನ್ನೆಲ್ಲಾ ನಾಳೆಗಳು " ಎನ್ನುವಂತಾಗಲಿ.

    ReplyDelete

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...