ಗೀಚಿದಷ್ಟೂ ನೀ ಮೂಡುತಿದ್ದೆ
ತಿದ್ದುವಿಕೆ ಹಿಂದೆ ಕರಗುತಿದ್ದೆ
ಇದ್ದ ಆಕಾರವ ಬಿಟ್ಟು,
ಬರೆದವನ ಬರವಣಿಗೆಯಾಧಾರಕೆ ಮಣಿದು
ದೃಢವಾಗಿದ್ದವ ಪುಡಿಯಾಗುತಿದ್ದೆ
ಜೇಬಿನೊಳಗೊಂದಿಷ್ಟು ಚೂರಾಗಿ ಉಳಿದು
ಬೇಡಿದವರಿಗೆ ಹಂಚುವಿಕೆಯಲ್ಲಿ ಮುರಿದು
ನಲಿಯುತಿದ್ದೆ ಸವೆಸಿದರೂ ವಿನಾಕಾರಣಕೆ
ಕ್ಷಣವಾದರೂ ನಿಲ್ಲದೆ ಹಾಗೆ ತಡೆದು
ಹಸಿದಾಗ ಚಪ್ಪರಿಸಿ ಕಡಿದವು ಹಲ್ಲು
ಕೊಟ್ಟೆಯಲ್ಲಾ ನಾಲಿಗೆಗೆ ಏನೋ ಸವಿ
ನಿನ್ನ ಅಂಚನು ಎಂಜಲಿಂದ ನೆನೆಸಿ ಬರೆದೆ
ಅದೇನು ಘತ್ತು ಮೂಡಿದಕ್ಷರಗಳ ಠೀವಿ!!
ಒಮ್ಮೊಮ್ಮೆ ಬಣ್ಣ ಮೈತುಂಬಿಕೊಳ್ಳುತ್ತಿದ್ದೆ
ಹಿಡಿದು ಬರೆದ ಬೆರಳುಗಳಿಗೇನೋ ಖುಷಿ
ತಪ್ಪುಗಳ ಅಳಿಸಿಹಾಕಲು ಅಂಟುವೆ ಕೈಗೆ
ಅದೇ ಕೈಗಳಿಂದ ಸರಿಯಾಗಿ ಬರೆಸಿ
ಈ ನಡುವೆ ನೀನೇಕೋ ಕಾಣಸಿಗುತಿಲ್ಲಾ
ಇಂದಿನ ಚಿಣ್ಣರಿಗೆ ಧೂಳು ಸರಿ ಬರದು
ಪೆನ್ಸಿಲ್ಲು-ರುಬ್ಬರ್ರು, ಹಾಳೆ ಮಡಿಲಿನ ಬರಹ
ಬೆಳೆದವರು ಸ್ಪರ್ಶ ರಟ್ಟುಗಳ ಕೈಲ್ಹಿಡಿದು
ನಿನ್ನ ಅನುಕರಿಸಿ ಹುಟ್ಟಿದವಲ್ಲಾ ಏನೇನೋ
ಆದರು ನಿನ್ನ ಮೆಟ್ಟುವವರಾರು ಹೇಳು
ನೆನಪುಗಳ ಸಾಲು-ಸಾಲಲಿ ನಿನ್ನದೇ ಗುರುತು
ನಿನಗೂ ಮರು ಜನ್ಮವಿದೆ ಚೂರು ತಾಳು!!
--ರತ್ನಸುತ
ಹಳ್ಳಿ ಇಸ್ಕೂಲಿನ ಮರಳಿನ ನೆಲ ಹಾಸಿನಲ್ಲಿ ಕೂತು ಸ್ಲೇಟಿಗೆ ಬಳಪ ತೀಡುತ್ತಿದ್ದ ಆ ಸವಿ ನೆನಪುಗಳನ್ನು ರಿಂಗಣಿಸಿ ಬಿಟ್ಟೆ ಗೆಳೆಯ. ಅಡಕಾಗು ಉಮ್ಮ ಉಮ್ಮ...
ReplyDeleteನನಗಿದ್ದ ನೆನಪು ಒಂದು ವರ್ಷದ ಅಂಗನವಾಡಿಯದ್ದಷ್ಟೇ, ಮುಂದೆಲ್ಲ ಕಾನ್ವೆಂಟ್ ಸ್ಕೂಲು ಅಲ್ಲಿ ಬಳಸಿದ್ದೆಲ್ಲಾ ಪೆನ್ಸಿಲ್ಲು, ಸ್ಲೇಟು-ಬಳಪ ತೀರಾ ವಿರಳ. ಈಗಂತೂ ಬಳಪ ಮಾಯವಾಗಿಬಿಟ್ಟಿದೆ, ಬರಿ ರಾಸಾಯ್ನಿಕ ಕಡ್ಡಿಗಳೇ ಹೆಚ್ಚು ಬಳಕೆಯಾಗುತ್ತಿವೆ .
Deleteಹೀಗಿರುವಾಗ ಬಳಪ ಸುಮ್ಮನೆ ಹಾಗೇ ನೆನೆಪಾಯಿತು, ನೆನಪು ಪದವಾಯಿತು.
ನಿಮ್ಮ ಅನಿಸಿಕೆಗಳಿಗೆ ಥ್ಯಾಂಕ್ಸ್ ಬದರಿ ಸರ್!!