Wednesday, 5 June 2013

ಒಬ್ಬ ನಾ - ಮತ್ತೊಬ್ಬ ನೀ

ಒಬ್ಬರ ಹನಿಗಳು
ಮತ್ತೊಬ್ಬರಿಗೆ ಕೇವಲ
ಒಬ್ಬರ ಹನಿಗವನ
ಮತ್ತೊಬ್ಬರಿಗೆ ನೀಳ
ಅಳತೆ ಮಾಡಿ ನೋಡಿದರೆ
ಎಲ್ಲವೂ ಎಲ್ಲರಂತೆಯೇ
ಒಂದೇ ಬಿಂಬದ ಕನ್ನಡಿ
ಹತ್ತು ಹಲವು ಮೂಲ

ಒಬ್ಬರ ಮೌನ
ಮತ್ತೊಬ್ಬರಿಗೆ ಶಾಪ
ಒಬ್ಬರ ಹಸಿವು
ಮತ್ತೊಬ್ಬರ ಪರಿತಾಪ
ಒಂದೇ ಮುಖ ಮುದ್ರೆಯೊಳಗೆ
ನೂರೆಂಟು ಮುಖವಾಡ
ದೇವರೂ ಚತುರನೇ ಸರಿ
ತಾಳಿದನು ಹಲವು ರೂಪ

ಒಬ್ಬರ ಅಭಿಲಾಷೆಗಳು
ಮತ್ತೊಬ್ಬರಿಗೆ ಅತಿರೇಖ
ಒಬ್ಬರ ಮನದಾಸೆಗಳು
ಮತ್ತೊಬ್ಬರಿಗೆ ನರಕ
ಒಂದೇ ಸೂಜಿಯ ಅಂಚನು
ಹಿಂಬಾಲಿಸಿದ ನೂಲಿಗೆ
ಹೊಲಿಗೆ ಹೊರಗೆ, ಒಳಗೆ
ಕಂಡೂ ಕಾಣದಿರುವ ತವಕ

ಒಬ್ಬರ ಒತ್ತು
ಮತ್ತೊಬ್ಬರ ಉದ್ಧಾರ
ಒಬ್ಬರ ಸ್ವತ್ತು
ಮತ್ತೊಬ್ಬರ ಅಧಿಕಾರ
ಬಂದೇ ಬರುವುದು ಕಾಲ
ಕಾದು ಕೂರುವುದು ಕೇಡು
ಬಿಗಿದ ಕೈಗಳೊಡನೆ ಪಡೆವ
ಆತ್ಮಬಲ ಅಪಾರ

ಒಬ್ಬರ ಹಾಡು
ಮತ್ತೊಬ್ಬರ ರೋಮಾಂಚನ
ಒಬ್ಬರ ಗೂಡು
ಮತ್ತೊಬ್ಬರ ಆಮಂತ್ರಣ
ಒಬ್ಬ ಮತ್ತೊಬ್ಬನೊಡನೆ
ಒಬ್ಬನಾಗಲೇ ಬೇಕು
ಕೂಡಿ ಬಿಡಿಸಿದಾಗ ವರ್ಣಮಯ
ಬಾಳ ಚಿತ್ರಣ .........

                         
                          --ರತ್ನಸುತ





2 comments:

  1. ಬದುಕಿನ ವೈಪರೀತ್ಯಗಳು ಚೆನ್ನಾಗಿ ಒಡಮೂಡಿದೆ, ಇಡೀ ಕವನದಲ್ಲಿ...

    ನಿಮ್ಮ ಮಾತು ಸರಿ,
    "ಒಬ್ಬರ ಸೊತ್ತು
    ಮತ್ತೊಬ್ಬರ ಅಧಿಕಾರ"

    ReplyDelete
    Replies
    1. ಧನ್ಯವಾದಗಳು ಬದರಿ ಸರ್ :)

      Delete

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...