Saturday 29 March 2014

ಬೇಸರದ ದಿನಗಳಲ್ಲಿ!!

ಬೆಳಕು ಹರಿದು ಸಾಕಷ್ಟು ಹೊತ್ತಾಗಿ
ತಡವಾಗಿ ತೆರೆದ ಕಣ್ಣುಗಳಂಚಿನಲ್ಲಿ
ತುಂಬಿಕೊಂಡಿದ್ದು ನೆನ್ನೆಯ ನೆನಪಿನ ಗೀಜು
ಮೂಗಿನಲ್ಲಿ ಅಟ್ಟುಗಟ್ಟಿದ ಸಿಂಬಳ
ನೆನ್ನೆಯ ಕರಾಳ ಘಮಲಿನ ಹೆಪ್ಪು,
ಉಸಿರಿಗೆ ಚೂರು ಒತ್ತಾಯದ ಬಿಸಿ

ಹೊದ್ದ ಕಂಬಳಿಯ ಮೇಲೆ ಹಾದು
ಗೋಡೆಗೆ ತಾಕಿದ ಬೆಳಕ ಸೇತುವೆ
ಅಣು ಅಣುವಿನಾಕಾರದ ಧೂಳಿನ ಸಂದೇಶಗಳ
ರವಾನಿಸುತ್ತಿದ್ದುದು ಗೋಡೆಗೆ ಕೇಳೋದುಂಟೆ?
ಕಾಣೋದುಂಟೆ?

ಸುತ್ತಲೂ ನಿರ್ಜೀವ ಜಡ ವಸ್ತುಗಳೇ;
ಮೂರು ವರ್ಷಗಳಿಂದ ನೀರೆರೆದು
ಸಾಕಷ್ಟು ಹಬ್ಬಿದ "ಮನಿ ಪ್ಲಾಂಟ್"
ಇನ್ನೂ ಹಸಿರೆಲೆಗಳನ್ನೇ ಬಿಡುತ್ತಿದೆ;
ಥೂ, ಹಳಾದ ಸೆಕೆ ಬೇರೆ!!

ಕಂಬಳಿ ಒದರಿದರೆ ಒಂದೇ ಬಿಸಿ-ಹಸಿ
ಕನಸುಗಳು ಚೆಲ್ಲಾಡಿ ಎಚ್ಚರಗೊಳ್ಳಬಹುದು,
ಮಡಿಸಿಡಬೇಕು ಮಗುವಂತೆ;
ನೆನ್ನೆ ಓದದೆ ಬಿಟ್ಟ "ಮಾಮೂಲಿ" ಪುಸ್ತಕದ
ಕೊನೆಯೆ ನಾಲು ಪುಟಗಳ 
ತಿರುವು ಹಾಕಬೇಕು
ಒಲೆ ಉರಿಸಲು ಹಾಳೆಗಳು ಸಾಕಾಗುತ್ತಿಲ್ಲ!!

ನೊಣಗಳೂ ಅನುಭವಿಸಿ ಬಿಟ್ಟ
ಚಹ ಲೋಟದ ಸ್ಥಿತಿ 
ಆ "ಮಾಮೂಲಿ" ಕಥಾ ನಾಯಕಿ
ರಾಮಿಯ ಹಾಗೆ;
ಸೂಳೆ ಮನೆಯೊಳಗೆ ಸತ್ತ
ಸೊಳ್ಳೆಯ ಹಾಗೆ!!

ಗಡಿಯಾರಕ್ಕೂ ಕೆಲಸವಿದೆ
ಕೂಲಿ ಕೊಡುವುದು ನನ್ನಿಷ್ಟಕ್ಕೆ ವಿರುದ್ಧ
ಗೋಡೆಗೆ ನೇತುಹಾಕಿದ ದೇವರು
ಎಂದಿನಂತೆ ನಗುತ್ತಿದ್ದ

ಕಣ್ಣಲ್ಲಿಯ ಗೀಜು ತೆಗೆದು
ಅಟ್ಟುಗಟ್ಟಿದ ಸಿಂಬಳವ ಉಂಡೆ ಮಾಡಿ
ಬಿಸಾಡುವಲ್ಲೇ ಎರಡು ತಾಸು;
ನೋಟಕ್ಕೂ, ಉಸಿರಾಟಕ್ಕೂ ನಿರಾಳ!!

ಮುಗಿಯುತ್ತಾ ಬಂದ ದಿನದಾರಂಬಕ್ಕೆ
ಒಂದು ಸಣ್ಣ ಆಕಳಿಕೆಯ ಶುಭ ಸ್ವಾಗತ!!

                                     -- ರತ್ನಸುತ

1 comment:

  1. ಮಾಮೂಲಾಗಿ ನಮ್ಮ ದಿನಗಳಾರಂಭವೂ ಇಂತೇ!!!

    ReplyDelete

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...