Saturday, 29 March 2014

ದೇವರು ನಗುತ್ತಿದ್ದಾನೆ

ಬೆಳ್ಳಂಬೆಳಗ್ಗೆ ಬೆಳಕು ಮೂಡುವ ಮುನ್ನ
ಅಪರೂಪದ ಸ್ನಾನ ಮುಗಿಸಿ
ಮೈಲಿ ಉದ್ದದ ಸಾಲಲಿ ನಿಂತದ್ದು
ಎಲ್ಲೋ ಪಟಗಳಲ್ಲಿ ಕಂಡ ದೇವರ
ಸಾಕ್ಷಾತ್ಕರಿಸಿಕೊಳ್ಳಲಿಕ್ಕೆ

ನೆರೆದಿದ್ದವರಲ್ಲಿ ಭಕ್ತಿಯೂ, ಭಯವೂ,
ಭಾವವೂ, ಬಾದೆಗಳ ಮುಡಿಕಟ್ಟು;
ದನಿ ಹೊರಡದ ತುಟಿಗಳಿಂದ
ಬಾರದ ಮಂತ್ರಗಳ ಪಟನೆ

ಎಲ್ಲೋ ಹಸಿದ ಹಸುಳೆಯ ಅಳಲು,
ಜಂಗುಳಿಯ ನಡುವೆಯೂ ಹಾಲುಣಿಸಲು
ಮುಂದಾದ ನಿಷ್ಠಾವಂತ ತಾಯಿ;
ಬೆಳಗಿನ ಕರ್ಮವ ತಪ್ಪಿಸಿದವರಿಂದ
ಸಹಿಸಲಾಗದಷ್ಟು ದುರ್ನಾತ ಪ್ರಾಪ್ತಿ,
ಮುಂದೆ ಸಾಗದ ಸಾಲು

ಅಲ್ಲಲ್ಲಿ ಜೋರು ಜೈಕಾರಗಳ ಸದ್ದು
"ತಿಂಡಿ ಮಾಡಿ ಬಂದಿರಬಹುದು ಬಹುಶಃ!!"
ಅನಿಸುವಷ್ಟರ ಮಟ್ಟಿನ ಉತ್ಸಾಹ;
ಹಣ್ಣು ಮುದುಕರ ಸುಸ್ತು,
ಬಿಸಿ ರಕುತ ಯುವಕರ ಅಸಹನೆ,
ನವ ದಂಪತಿಗಳ ಬೆರಗು!!

ನಾನಾ ಭಾಷಿಗರ ನಡುವೆ
ನಮ್ಮವರಾರಾದರೂ ಸಿಗಬಹುದುದೆಂಬ ಭ್ರಮೆ
ಭ್ರಮೆ, ಕೊನೆಗೂ ಭ್ರಮೆಯೇ!!
ಚೂರು ಜರುಗಿತು ಉದ್ದ ಸಾಲು,
ಮತ್ತೆ ಜೋರು ಜೈಕಾರ!!

ಲಾಡು ಪ್ರಸಾದಕ್ಕೆ ನೂಕು ನುಗ್ಗಲು
ಸಿಕ್ಕೇ ಸಿಗುತ್ತದೆಂದು ತಿಳಿದಿದ್ದರೂ ಸಹಿತ;
ಮಾರು ದೂರದಲ್ಲಿ ನಗುತ್ತಿದ್ದ ದೈತ್ಯ ಮೂರ್ತಿ
ಭಕ್ತರಿಂದ ಬೇಡಿಕೆಗಳ ಅರ್ಪಣೆ !!

ಫಕೀರನಾಗಿದ್ದವನಲ್ಲಿ ಅಮೀರನು
ಗೋಪುರ, ಸ್ತಂಭ, ಚೌಕಟ್ಟು
ಆರತಿ ತಟ್ಟೆ, ಹೂಬುಟ್ಟಿ ಸೇರಿ
ಆಸನವೂ ಚಿನ್ನದ್ದು;
ದೇವರು ನಮ್ಮನ್ನ ನೋಡಿ ನಗುತ್ತಿದ್ದಾನೆ
ವ್ಯಂಗ್ಯವಾಗಿ!!
ಅಲ್ಪ  ಕಣ್ಗಳಿಗದು 
ಹಿಂದೆಂದೂ ಕಾಣದ ತೇಜಸ್ಸು!!

ಗುಡಿಯ ಒಳಗೂ, ಹೊರಗೂ
ಭಿಕ್ಷುಕರ ದಂಡು
ನಾನೂ ಒಬ್ಬ ಅವರಲ್ಲಿ;
ದೇವರಿನ್ನೂ ನಗುತ್ತಿದ್ದಾನೆ
ಕಾರಣ ಕೇಳುವರೆಂದು ಕಲ್ಲಾಗಿ ಉಳಿದು
ಹೌದು ಅದು ವ್ಯಂಗ್ಯ ನಗು...

                              -- ರತ್ನಸುತ

1 comment:

  1. ಕಲ್ಲಾಗಿ ಕುಳಿತ ದೇವರ ಸುತ್ತ ಮುತ್ತ ಸಮರ್ಥ ವಿಶ್ಲೇಷಣೆ....

    ReplyDelete

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...