Thursday, 20 March 2014

"ಪ್ಯಾರಿಸ್" ಒಂದು ಸುಂದರ ನೆನಪು

ರಸ್ತೆ ದಾಟಿತು ನಾಯಿ ಮರಿ
"ಅದೆಂಥ ಸಾಧನೆ?" ಅನ್ನದಿರಿ
ಅದು ದಾಟಿದ್ದು ಪ್ಯಾರಿಸ್ಸಿನ
'ಆರ್ಕ್ ಡಿ ಟ್ರಿಯಾಂಫ್' ವೃತ್ತದ ರಸ್ತೆ!!

ಇಲ್ಲಿ ರಸ್ತೆ ದಾಟಿ ಅನಾಹುತಕ್ಕೆ
ಪೆಟ್ಟಾದರೂ ಸರಿ, ಸತ್ತರು ಸರಿಯೇ 
ಆರೋಗ್ಯ ವಿಮೆ, ಜೀವ ವಿಮೆ
ಬಳಸಲು ಬರುವುದೇ ಇಲ್ಲ

"ಅರೆ!! ನಾಯಿಗ್ಯಾವ ವಿಮಾ ಕಂಪನಿ?"
"ಇದ್ದರೂ ಮಾಡಿಸುವವರಾದರೂ ಯಾರು?"
ಎದ್ದ ಪ್ರಶ್ನೆಗಳು ಕಾಡುತ್ತಲೇ 
ರಸ್ತೆ ದಾಟಿಸಿಯೇ ಬಿಟ್ಟಿತ್ತು !!

ನೆಪೋಲಿಯನ್ನಿನ ಕನಸಿನ ಸ್ಮಾರಕ
ಯುದ್ಧದಿ ಪ್ರಾಣ ತೆತ್ತ
ಜೆನರಲ್ಲುಗಳ ನೆನಪಿನ ಅಚ್ಚು
ಫ್ರೆಂಚ್ ದೇಶದ ಚೊಕ್ಕ ಕಲಾಕೃತಿ

ಕ್ಲಿಕ್..ಕ್ಲಿಕ್.. ಮತ್ತೆರಡು ಪಟ ಸೆರೆ
ನಾನೂ ಇಲ್ಲಿದ್ದೆನೆಂಬ ಗುರುತಿಗೆ
ಗೈಡು ಕೊಟ್ಟ ಗಡುವು ಮುಗಿದು 
ಸುರಂಗದ ನಡಿಗೆ ಬಸ್ಸೆಡೆಗೆ

ವ್ಹೇಲ್ಸಿನ ಯುವರಾಣಿ ಡಯಾನಾ 
ಸತ್ತ ಸ್ಥಳದಲಿ ಕಂಬನಿ ಮಿಡಿದು
ಈಫಿಲ್ ಟವರಿನ ತುತ್ತ ತುದಿಯಲಿ
ಪೂರಾ ಪ್ಯಾರಿಸ್ಸೊಬಗನು ಸವಿದು....

ಸೀಟಿನ ಬದಿಯ ಗಾಜಿಗೆ ಅಂಟಿ
ಉಸಿರನು ಚೆಲ್ಲಿ, ಬೆರಳಲಿ ಗೀಟಿ
ಬೋದಿಲೇರನ ನೆನಪಾಗಿಸಿತು
"ಝೂ ತೆಹ್ಮ್" ಮನ ಉಚ್ಚರಿಸಿತು!!

                                 -- ರತ್ನಸುತ

1 comment:

  1. ನವ್ಯೋತ್ತರ ಶೈಲಿಯಲ್ಲಿ ಕಟ್ಟಿಕೊಟ್ಟ ಚಿತ್ರಣ ನೆಚ್ಚಿಗೆಯಾಯಿತು.
    ಭಾಷಾ ಬಳಕೆಗೆ ಭಾವಕ್ಕೂ ಸೇರಿ ಫುಲ್ ಮಾರ್ಕ್ಸ್.

    ReplyDelete

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...