Sunday, 2 March 2014

ಆಕೆ ನೀನಲ್ಲ ಬಿಡು !!

ಗೇಲಿ ಗಲ್ಲದ ಹುಡುಗಿ 
ನೀನಲ್ಲ ಬಿಡು ಆಕೆ,
ಅವಳು ನಾನ್ನಾಕೆ;
ಮಾತಿಗೇ ನಾಚಿದವಳಾಕೆ 
ನೆಚ್ಚಿನ ಬಣ್ಣದ 
ಲಂಗದ ಲಾಡಿಯಲಿ 
ನನ್ನ ಕಟ್ಟಿಟ್ಟು, 
ಮುತ್ತಿಟ್ಟು, ಮುಂದೆ.... 
 
ಅದೆಷ್ಟು ಬಣ್ಣದ ಸಾಲು 
ಸೋತವನ ಮರುಳು ಮಾಡಲಿಕ್ಕೆ?!!
ಎಣಿಸುತ್ತಲೇ ನಾನೂ 
ಕೊನೆ ಸಾಲಲ್ಲಿ ನಿಂತಿದ್ದೆ 
ಬಣ್ಣವಾಗಿ,
ಸೋತ ಸುಣ್ಣವಾಗಿ; 
ಕುಪ್ಪಸಕ್ಕೆ ಹೊಂದುಕೊಳ್ಳದೆ 
ಲಂಗದಲ್ಲೇ ಉಳಿದು 

ಹೆಸರು ಕೇಳುವ ಮುನ್ನ 
ಪಿಸು ಮಾತ ಚೆಲ್ಲಿ 
ಮೂಖನಾಗಿಸಿದಾಕೆ 
ನೀನಲ್ಲ, ಅವಳು; 
ಹೆಸರು ಹೇಳಲೇ ಇಲ್ಲ, 
ಬೇಕಾಗಿಯೂ ಇರಲಿಲ್ಲ
ನೆರಳುಗಳು ಆಗಲೇ 
ಒಪ್ಪಂದಕೆ ಸಹಿ ಮಾಡಿದ್ದವು!!

ಕಾಮಿಸಿದ್ದು ನಿಜ; 
ಮೊದಲ ನೋಟಕ್ಕೆ 
ಹೀಗೆಲ್ಲ ಸಹಜ 
ಪಾಪಿ ಹುಡುಗರಲ್ಲಿ. 
ಅದಕ್ಕಾಗೇ ಚೂರು 
ಮುಜುಗರದಲ್ಲಿ ಹತ್ತಿರವಾದೆ 
ಲಜ್ಜೆಗೆ ಮೆತ್ತಿದ 
ಮಸಿಯ ಒರೆಸಿಕೊಂಡು 

ನೀನಲ್ಲ ಬಿಡು 
ಬಿಗಿಹಿಡಿದುಕೊಂಡವಳು;
ಮಿಲನದಲ್ಲಿ ಎದೆ ಸಹಿತ 
ಕರಗಿತ್ತು ನನ್ನದು, ಆಕೆಯದ್ದೂ.  
ಇಗೋ ಎಷ್ಟು ಅಂತರ 
ಎಷ್ಟೇ ಸನಿಹಗೊಂಡರೂ ಇಲ್ಲಿ 
ರೆಪ್ಪೆ ಸರಾಗವಾಗಿ ಬಡಿದುಕೊಳ್ಳುತ್ತಿದೆ 
ಅಧರಗಳು ಕಂಪಿಸುತ್ತಲೇ ಇಲ್ಲ!!

ನೀನೇ ಆಗಿದ್ದರೆ 
ಎಲ್ಲಿ ಆ ಏದುಸಿರು?
ಏರಿಳಿದೇಟಿಗೆ 
ಪರಚು ಗಾಯವ ಬಿಟ್ಟು 
ಹಿಂದೆಯೇ ಗಂಧ ಲೇಪಿಸಿ 
ತಂಪೆರೆದ ಕೈ ಬೆರಳು?
ಉದರದಲ್ಲಿ ಬಡಿಸಿದ 
ಕಚಗುಳಿಯ ತುತ್ತು?

ಇನ್ನು ನಿನ್ನ ಮರ್ಮ 
ನನ್ನ ನಿದ್ದೆ ಕೆಡಿಸಲಾರದು;
ನಿದ್ದೆಗೆಡಿಸುವಾಕೆ ಸಿಕ್ಕು 
ಒಂದಿರುಳು ಕಳೆದಾಗಿದೆ. 
ಕನಸಿನ ರಾಣಿಯೇ ಕ್ಷಮಿಸು!!
ಪಲ್ಲಂಗಕೆ ನಿನ್ನ ಸಂಗ ಅನವಶ್ಯಕ,
ಸಂಗಾತಿ ಸಿಕ್ಕಿಹಳು 
ಕಳೆದು ಹೋಗು !!

                      -- ರತ್ನಸುತ 

1 comment:

  1. ಇಷ್ಟು ದಿನ ಕನಸನ್ನು ರಂಗೀನ್ ಆಗಿಸಿದ ಅವಳನ್ನು ಹಾಗೆಲ್ಲ ಜೋಡಿ ಸಿಕ್ಕಿತೆಂದು ದೂರ ತಳ್ಳಲು ಬಹುದೇ ರಸಿಕ ಕವಿಯೇ?

    ReplyDelete

ಹೃದಯವ ನೀಡಲೇ

ಹೃದಯವ ನೀಡಲೇ ಹೇಳದ ಮಾತಿವೆ ನೂರಾರು ಆಲಿಸು ಈಗಲೇ ಪಾಲಿಸಿ ನಿನ್ನಯ ನೆರಳನು ಹೃದಯವ ನೀಡಲೇ ಹೊಂಗನಸ ಅಂಗಳದಿ ಅರಳಿರುವ ಚಂದಿರ ನೀ  ಯಾರಿರದ ತೀರದಲಿ ಅಲೆಗಳಲೂ ನಿನ್ನ ದನಿ  ...