Sunday, 30 March 2014

ಬೆತ್ತಲಾಗುತ್ತಿದ್ದೇನೆ !!

ಸುಮ್ಮನಾಗುವುದಕ್ಕಲ್ಲ ಬೆತ್ತಲಾಗೋದು
ಮುಕ್ತವಾಗೋಕೆ ಮೈ-ಮನಸುಗಳು;
ಮಥಿಸಲಿಕ್ಕೆ ನಡುವಿನಂತರಗಳ
ಬೆರೆಯಲಿಕ್ಕೆ ಅನೇಕದೊಳಗೇಕತೆಯ ಹುಡುಕಿ!!

ಕಾಣದ ನಾವುಗಳು ನಾವಾಗಲು,
ಅಂತೆಯೇ ತಾವಾಗಲು
ಲಜ್ಜೆ ಬಿಟ್ಟು ಗೆಲ್ಲಬೇಕು ಒಬ್ಬೊಬ್ಬರ
ಸೋತ ಅಹಂ ಅದೆಷ್ಟು ಸುಂದರ!!

ಗಾಳಿ, ಬಳ್ಳಿ, ಹೂವು, ಮುಳ್ಳು
ಬೆತ್ತಲಾಗುವುದೇ ಇದಕೆ;
ಪ್ರಕೃತಿಯ ಸಹವಾಸಕೆ
ವಿಕೃತಿಯ ಸೆರೆವಾಸಕೆ

ಹೂವು ಮೈನೆರೆದು ಕಾಯಾಗಿ,
ಕಾಯಿ ಕಾಯದೇ ಹಣ್ಣಾಗಿ ಕೊಳೆತು,
ಮಣ್ಣಾಗಿ ಮೊಳೆತು,
ಎಳೆ ಚಿಗುರು ಕಂಡದ್ದು
ದಿಗಂಬರಾವರಣದಲಿ
ತನ್ನ ಸಹಜ ಸ್ಥಿತಿಯ!!

ಮೈ ಮುಚ್ಚಿಕೊಂಡವರು
ಗುಪ್ತವಾಗುತ್ತಾರೆ ಪ್ರಕೃತಿಯ ಪಾಲಿಗೆ
ಪರಸ್ಪರ ಶಂಕೆಯಲ್ಲೇ ಉಳಿದು
ದೂರಾಗುತ್ತಾರೆ ಹತ್ತಿರದಲ್ಲೂ!!

ಹುಟ್ಟು, ಸಾವಿನ ಹೋರಣದ ನಡುವೆ
ಆ ಸಣ್ಣ ಹೂರಣದ ಸಿಹಿಗೆ
ಎಟುಕದ ಜಿಗಿತ, ತಲುಪದ ಚಾಚು
ಸಾಗದ ದಾರಿ, ಸೇರದ ದಿಕ್ಕು
ಒಮ್ಮೆ, ಮತ್ತೊಮ್ಮೆ, ಮಗದೊಮ್ಮೆ!!

ಹೆಸರಿಲ್ಲದೆ ಜನನ
ಅದ ಲೆಕ್ಕಿಸದ ಪ್ರಕೃತಿ ಪ್ರಯಾಸ
ಅದ ಅಳಿಸೋ ಮರಣ
ಮೂರೇ ಅಸತ್ಯ ಹೂತು ಹಾಕಿದ ಸತ್ಯಗಳು!!

ಬೆತ್ತಲಾಗುತ್ತೇನೆ ಎಂದಾದರೊಮ್ಮೆ
ನೀಯತ್ತಿನ ಗುಲಾಮನಾಗಿ!!

                               -- ರತ್ನಸುತ

1 comment:

  1. ಕವಿತೆಯ ಆಳದಲ್ಲಿ ಪ್ರತಿದ್ಸುಧ್ವನಿಸಿರುವ ಕವಿಯ ಪ್ರಾಮಾಣಿಕತೆ ಮೊದಲು ಮನಸೆಳೆಯುತ್ತದೆ.

    ReplyDelete

ಹೃದಯವ ನೀಡಲೇ

ಹೃದಯವ ನೀಡಲೇ ಹೇಳದ ಮಾತಿವೆ ನೂರಾರು ಆಲಿಸು ಈಗಲೇ ಪಾಲಿಸಿ ನಿನ್ನಯ ನೆರಳನು ಹೃದಯವ ನೀಡಲೇ ಹೊಂಗನಸ ಅಂಗಳದಿ ಅರಳಿರುವ ಚಂದಿರ ನೀ  ಯಾರಿರದ ತೀರದಲಿ ಅಲೆಗಳಲೂ ನಿನ್ನ ದನಿ  ...