Tuesday, 25 March 2014

ಗುಂಡು ತೋಪಿನಾಚೆ !!

ಗುಂಡು ತೋಪಿನ ಗುಟ್ಟುಗಳು
ಆಗಾಗ ತೆರೆದುಕೊಳ್ಳುತ್ತವೆ
ಏಕಾಂತದಲ್ಲಿ!!

ಒತ್ತಿಟ್ಟರೂ ಚಿಮ್ಮುವ 
ಕಿತ್ತಿಟ್ಟರೂ ಹೊಮ್ಮುವ
ಕಾಮನೆಗಳ
ಪುಸ್ತಕದ ಕೊನೆ ಪುಟದಲ್ಲಿ
ಗೀಚಿಬಿಟ್ಟರೂ
ಅಂಗಾತ ತೆರೆದಾಗ 
ಕಣ್ಮುಂದೆ ಬರುತಾವೆ!!

ಹರಿದು ಬಿಸಾಡುವಂತಿಲ್ಲ
ನಾಳೆಗಳಿಗೆ ಬೇಸರವಾಗಬಹುದು;
ಮಡಿಸಿ ಇಡುವಂತಿಲ್ಲ
ಸುಕ್ಕುಗಟ್ಟಿ ಹಾಳಾಗಬಹುದು!!

ಎಂದಾದರೂ ಆ ತೋಪಿನ 
ಹೆಮ್ಮರದ ಬುಡದಲ್ಲಿ
ಹೂತು ಬಿಡಬೇಕು
ಹಸ್ತ ಮೈಥುನವಾಗಿ
ಮಂಕು ಬಳಿದಂತೆ;
ಅಲ್ಲಿ ಹೊಸ ನೆನಪುಗಳು
ಚಿಗುರೊಡೆಯಬೇಕು
ವೀರ್ಯಾಣುಗಳಂತೆ
ಲೆಕ್ಕ ಮೀರುವ ಸಂಖ್ಯೆಯಲ್ಲಿ !!

ಹಿಂದೆ ತಿರುಗಿದರೆ
ಕಾಣಸಿಗುವುದು ಹೆಮ್ಮರವಷ್ಟೇ;
ಅದರಾಚೆ ಖಾಲಿ ಬಯಲು.

ಕಣ್ಮುಂದೆ ಇನ್ನು ಎಷ್ಟೋ 
ಮರದ ಬುಡ ಮಡಿಲುಗಳು
ಕೈ ಚಾಚಿ ಕರೆದಿವೆ
ಹೊಸ ಅನುಭೂತಿಗೆ!!

ಒಂದೊಂದನ್ನೂ ಪರಗಣಿಸುತ್ತಾ ಹೋದರೆ
ಯೌವ್ವನ ತೋಪಿನಲ್ಲೇ ಕಳೆಯ ಬೇಕು!!

ಕೊಠಡಿಯ ಪಲ್ಲಗ
ಇದೇ ತೋಪಿನ 
ಬೇವಿನ ಮರದ್ದು;
ಕನಸುಗಳಾವತ್ತೂ ಕಹಿಯಾಗಿಲ್ಲ
ಉಪ್ಪು, ಖಾರ, ಹುಳಿ,
ಸಿಹಿ, ಸಪ್ಪೆ ಎಲ್ಲವನ್ನೂ ಬಡಿಸಿತು!!

ನಿದ್ದೆ ಬರಿಸುತ್ತಿದೆ ಕಣ್ಣು
ದಿಂಬು ಮಲಗಬಿಟ್ಟರೆ ತಾನೆ...!!

                              -- ರತ್ನಸುತ

1 comment:

  1. ಅದೇ ತೋಪಿನ ಮರದ ಹಲಗೆಗಳಿಂದಾದ ಪಲ್ಲಂಗ. ಪವಡಿಸಿದರೆ ಬಿಟ್ಟೀತೆ ಅದರ ಪೂರ್ವ ವಾಸನೆ?

    ReplyDelete

ಹೃದಯವ ನೀಡಲೇ

ಹೃದಯವ ನೀಡಲೇ ಹೇಳದ ಮಾತಿವೆ ನೂರಾರು ಆಲಿಸು ಈಗಲೇ ಪಾಲಿಸಿ ನಿನ್ನಯ ನೆರಳನು ಹೃದಯವ ನೀಡಲೇ ಹೊಂಗನಸ ಅಂಗಳದಿ ಅರಳಿರುವ ಚಂದಿರ ನೀ  ಯಾರಿರದ ತೀರದಲಿ ಅಲೆಗಳಲೂ ನಿನ್ನ ದನಿ  ...