Monday, 31 March 2014

ಸಂಕ್ರಮಣ

ತುರುಬಲ್ಲಿ ಸಿಟ್ಟನ್ನ
ಕಣ್ಣಲ್ಲಿ ಘಾಟನ್ನ
ಎದೆಯಲ್ಲಿ ಬೆಂಕಿನ
ತುಂಬಿದವಳೇ ನಿನ್ನ
ಗುಣಗಾನ ಮಾಡುವುದು
ಎಷ್ಟು ಸರಿ-ತಪ್ಪೆಂದು
ಲೆಕ್ಕ ಹಾಕುತ್ತಲೇ 
ಆಯ್ತು ಸಂಕಲನ 

ನೀಯಾರು ಎಂದೆದ್ದ
ನೂರು ಪ್ರಶ್ನೆಗಳಲ್ಲಿ
ನೀ ಸಿಗದ ಉತ್ತರ-
-ವೆಂದರಿತ ನನ್ನೊಳಗೆ
ನಾನಾರೆಂಬುದೇ 
ಮರೆತಂತಾಗಿರಲು
ಹುಡುಕಾಟ ಎಬ್ಬಿಸಿತು
ದೊಡ್ಡ ಸಂಚಲನ

ಓರೆಗಣ್ಣಿನ ನೋಟ
ಕೆಮ್ಮಣ್ಣ ಗಲ್ಲ
ಸೊಕ್ಕಿದ ಅಧರ
ನಾಚದ ಅಂಗುಟ
ಬೆಳ್ಮುಗಿಲ ಸೊಬಗು
ಏರಿಳಿದ ಮೈ ಸಿರಿ
ತಿದ್ದಿ ತೀಡಿದವಷ್ಟೇ
ನಿನ್ನ ಸಮ್ಮಿಲನ

ಎಂಥವರ ಸಿಟ್ಟಿಗೂ
ಸಿಟ್ಟು ತರಿಸಲು ಬಲ್ಲ
ನಿನ್ನ ಉಕ್ಕಿನ ನಡೆ
ಕಾಲ್ಗೆಜ್ಜೆ ಸದ್ದು
ಮೌನದಲಿ ಗ್ರಹಿಸಿದ
ಇಂದ್ರಿಯಗಳೊಡನೆ
ನಡೆಸಿತು ನವಿರಾದ
ಮೌನ ಸಂವಹನ

ನಿವೇದನಾತುರದಲ್ಲಿ
ನಡುಗಿದ ನರಗಳು
ನುಂಗಿಕೊಂಡಾಡಿದ
ಹೊಮ್ಮದ ಪದಗಳ
ಪರಿಚಯಿಸದೆ ಹೋಗಿ
ಹೆಂಬೇಡಿ ಆದೆನು
ನಿನ್ನ ಜಾಗದಿ ಈಗ
ನೆನಪ ಸಂಕ್ರಮಣ

          -- ರತ್ನಸುತ

1 comment:

  1. "ಎಂಥವರ ಸಿಟ್ಟಿಗೂ
    ಸಿಟ್ಟು ತರಿಸಲು ಬಲ್ಲ"
    ಆಕೆ ಇಲ್ಲಿ ನವಿರಾಗಿ ಮೂಡಿಬಂದಿದ್ದಾಳೆ...

    ReplyDelete

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...