ನನ್ನ ನಗುವಲ್ಲಿ ಲೋಪ ಕಂಡುಬಂದಲ್ಲಿ
ಅದ ನೀನೇ ಸರಿಪಡಿಸಿಬಿಡು
ಏಕೆಂದರೆ ನಿನ್ನೆದುರು ಮುಕ್ತನಾದೆನೆಂಬ ತೃಪ್ತಿ
ನನಗಷ್ಟೇ ಅಲ್ಲ, ನಿನಗೂ ಸಲ್ಲಬೇಕು
ಪ್ರೇಮ ನಿವೇದನೆ ಮಾಡುವ ಹೊತ್ತಲ್ಲಿ
ವ್ಯಕ್ತ ಭಾವಗಳ ಪುನರುಚ್ಚರಿಸುವಂತೆ ಪೀಡಿಸದಿರು
ಮಹಲನ್ನು ಒಮ್ಮೆಯಷ್ಟೇ ಕಟ್ಟಬಲ್ಲೆ
ನಕಲು ಮಾಡ ಹೋದರೆ ಆಭಾಸವಾದೀತು
ಆಡಿದ ಸುಳ್ಳನ್ನು ಸಲೀಸಾಗಿ ಹಿಡಿವೆ
ಅಂದರೆ, ನೀನೂ ಸುಳ್ಳಾಡುವಲ್ಲಿ ನಿಸ್ಸೀಮಳೇ!
ಒಂದು ಒಪ್ಪಂದ ಮಾಡಿಕೊಳ್ಳೋಣ
ಬದುಕು ನೀರಸವಾದಲ್ಲಿ, ಸುಳ್ಳಾಡಿ ಸಿಂಗರಿಸಿಕೊಳ್ಳೋಣ
ನಾವು ಸಾಗುವ ದೋಣಿ ಬಿರುಕು ಬಿಟ್ಟಿದೆ
ಆಗಾಗ ಬೊಗಸೆಯಿಂದ ನೀರು ಮೊಗೆದು ಹಾಕಬೇಕು
ಈಜು ಕಲಿತಿರಬೇಕು ಒಬ್ಬರನ್ನೊಬ್ಬರು ಕಾಪಾಡಲು
ಸಿಕ್ಕಿದ್ದೇ ನಮ್ಮ ದಡವಾಗುವುದು ಬೇಡ
ಮುಟ್ಟಬೇಕಾದಲ್ಲಿಗೆ ಮುಟ್ಟಿಯೇ ತೀರೋಣ
ನಿನ್ನ ಮಾತಿಗೆ ಸಾವಿರ ಅರ್ಥವಿದೆ
ನನ್ನ ಮೌನದಲ್ಲಿ ಅದಕ್ಕೂ ಮಿಗಿಲು ಅರ್ಥ ಕಾಣುತಿ
ಹೀಗೆ ಮುಂದುವರಿದ ಸಂವಹನದಲ್ಲಿ
ನಮ್ಮ ದೌರ್ಬಲ್ಯಗಳ ನೀಗಿಸಿಕೊಂಡು ಸಶಕ್ತರಾಗೋಣ
ಸೂರ್ಯ, ಚಂದ್ರ, ಹಗಲು-ರಾತ್ರಿ
ತಾರೆ, ಮೋಡ, ಹಸಿರು, ಪ್ರಾಣಿ-
ಪಕ್ಷಿ
ಕಾಮನಬಿಲ್ಲು, ಮಳೆ, ಬಿರುಗಾಳಿ
ನೆರೆ, ಬರ, ವಿಕೃತಿ, ವಿಪತ್ತು
ಇವೆಲ್ಲವೂ ಇರಲಿ ನಮ್ಮ ಪಯಣದ ಜೊತೆ
ಅವು ನಮ್ಮ ಕತೆಯ ಭಾಗವಾದಂತೆ
ನಾವೂ ಅವವುಗಳ ಭಾಗವಾಗಬೇಕು
ಇದೋ ಮರೆತೆ, ಬಣ್ಣದ ಚುಕ್ಕೆಯ ಸೀರೆ
ಎಷ್ಟು ಬಣ್ಣಗಳಿರಬಹುದೆಂದು ಎಣಿಸಿ ಸೋತಿದ್ದೇನೆ
ಹೇಗಿದ್ದರೂ ಜೀವನಮಾನವಿಡೀ ಉಡುತ್ತೀಯಲ್ಲ
ಲೆಕ್ಕ ಸಿಕ್ಕರೆ ತಿಳಿಸು, ಅಥವ ಜೊತೆಗೇ ಎಣಿಸಿ ಕೂರೋಣ!
No comments:
Post a Comment