ಎತ್ತಿನ್ ಬಂಡಿ ಚಕ್ರಕ್ಕೊಂದು ಸತ್ಯ ಗೊತ್ತೈತೆ
ಬಂದ ದಾರಿ ಮಧ್ಯೆ ಒಂದು ಹಳ್ಳ ಇತ್ತಂತೆ
ಹಳ್ಳ ತಪ್ಪಿದ್ದೆಂಗೆ ಅಂತ ಯಾರ್ಗೂ ಗೊತ್ತಿಲ್ಲ
ಕೇಳೋಣಾಂದ್ರೆ ಪಾಪ ಎತ್ಗೊಳ್ಗ್ ಮಾತೇ ಬರಲ್ಲ
ಹುಲ್ಲಿನ್ ಹಾಸ್ಗೆ ಮೇಲೆ ಕೂತು ಚಾಟಿ ಬೀಸೋನು
ಹೆಚ್ಚೇನಿಲ್ಲ ಹೊತ್ಸಿಟ್ಟವ್ನೆ ಮಂಕು ಲಾಟೀನು
ಕಾಲಿಗ್ ಕಟ್ಟಿದ್ ಗೆಜ್ಜೆ ನಾದ ಮಾಂಪ್ರು ತರ್ಸಿತ್ತು
ಊರ್ದಾರಿ ಬಿಟ್ಟು ಬಂಡಿ ದೂರ ಸಾಗಿತ್ತು
ಹಿಂದೆ ಕಾಡು, ಮುಂದೆ ಕಾಡು, ಸುತ್ಲೂ ಕಗ್ಗತ್ಲು
ಎಂದೋ ಬೈಕೊಂಡಿದ್ಕೆ ಪತ್ತೆ ಇಲ್ಲ ಬೆಳ್ದಿಂಗ್ಳೂ
ಮರ್ಗಳ್ ಶಬ್ಧ ಮಾಡ್ಬೋದಿತ್ತು ಯಾಕೋ ಅವತ್ತು
ಗಾಳಿ ಸತ್ತಂಗಿತ್ತು ಬಾಯಿಗ್ ಬೀಗ ಹಾಕ್ಕೊಂಡು
ಗೂಬೆ ಕೂಗಿ ಗುಂಡ್ಗೆ ಧಡ ಧಡ ಅಲ್ಲಾಡೋಗಿತ್ತು
ನರಿಗಳ್ಗೇನೋ ಬಾದೆ ಆಗಾಗ್ ಬಾಯ್ಬೊಡ್ಕೋತಿತ್ತು
ಕೊಂಬಿನ್ನೇರ ಯಾರೋ ದೂರ್ದಲ್ ಕಂಡಂಗೇ ಕಂಡು
ಮಾಯಾ ಆಗ್ವಾಗ್ ದೆವ್ವ ತಲೆ ಮೇಲ್ ಕೂತಂಗೆ ಖುದ್ದು
ಅವ್ವ ಕಟ್ಟಿದ್ ಆಂಜಿನೇಯನ್ ಯಂತ್ರ ನೆನ್ಪಾಗಿ
ಕಣ್ಣು ಮುಚ್ಚಿ ಮುಷ್ಠಿಲಿಡ್ದು ಜೋರಾಗ್ ಕೂಗ್ಕೊಂಡೆ
ಧೋ ಅಂತ ಮಳೆ ಬಿದ್ದಂಗ್ ಕಣ್ಬಿಟ್ನೋಡಿದ್ರೆ
"ಹೊತ್ತು-ಗೊತ್ತು ಇಲ್ಲ" ಅಂತ ಅವ್ವ ಬೈತಿದ್ಲು
ಗಾಡಿ ಕಟ್ಟು ಸಂತೆಗೋಗಿ ಬರಿವೆ ಅಂತಂದ್ಲು
"ಹಗ್ಲ್-ಗನ್ಸು ನಿಜ್ವಾಯ್ತದೆ ಅಲ್ವಾ?" ಅಂತಂದೆ
"ನೆನ್ನೆ ಗಂಟ ರಾಜ್ಕುಮಾರನ್ ಕನ್ಸ ಕಾಣ್ತಿದ್ದೆ"
"ಆದ್ರೂ ಭೂಮಿಗ್ ಭಾರ ಎದ್ದೋಗ್ ಕ್ಯಾಮೆ ನೋಡಂದ್ಲು"
ಯಾವತ್ನಂಗೆ ಎತ್ಗೋಳ್ ಭುಜಕ್ಕೆ ನೊಗನ ಕಟ್ಕೊಂಡು
ಚಕ್ರ ಪಕ್ರ, ಆಚೆ ಈಚೆ ಕಣ್ಣು ಹಾಯ್ಸ್ಕೊಂಡು
ಕತ್ಲಾದ್ರಿರ್ಲಿ ಅಂತ ಲಾಟೀನ್ ಕೊಟ್ಳು ನನ್ನವ್ವ
ಹಳ್ಳ ಗಿಳ್ಳ ಕಂಡ್ರೆ ಹಂಗೇ ಒದ್ದಾಡೋದ್ ಜೀವ...
No comments:
Post a Comment