Friday 27 November 2020

ನಿನ್ನಿಂದ ಏನಾದರೂ ಕಲಿಯದ ಹೊರತು

ನಿನ್ನಿಂದ ಏನಾದರೂ ಕಲಿಯದ ಹೊರತು

ಗುರುವೆಂದು ನಿನ್ನ ಹೇಗೆ ಕರೆಯಲೈಯ್ಯ
ಮಣ್ಣಿಂದ ಏನಾದರೂ ಬೆಳೆಯದ ಹೊರತು 
ಹಸಿವ ಗೆಲ್ಲುವ ಸಾಧನವ ತೋರಿಸೈಯ್ಯ 
ಮಾತಿಂದ ಬಿರುಕು ಮೂಡುವುದಾದರೆ ನನ್ನ
ಮೂಕನಾಗಿಸಿಬಿಡು ಮರು ಮಾತೇ ಇರದೆ 
ಮನಸಲ್ಲೇ ನೆಲೆಸಿದರೂ ಎಲ್ಲೆಲ್ಲೂ ಹುಡುಕಾಟ 
ದಣಿದಿರುವೆ ನಾನೀಗ ನೀ ಕಾಣಸಿಗದೆ ... 

ಸದ್ದಿನಲೂ ನೀರವ, ಕಣ್ತುಂಬಿಕೊಳ್ಳುವ 
ಆ ದಿವ್ಯ ಗಳಿಗೆಗಾಗಿ ಕಾಯುತಿರುವೆ 
ಬೇಡೆಂದು ಬಿಟ್ಟರೂ, ನೆರಳಾಗಿ ಬಂದವ 
ನಿನ್ನಾಟಕೆ ಸೋತು ಶರಣಾಗುತಿರುವೆ 
ನಾಮವಿರದ ಸರ್ವ ನಾಮವೂ ನಿನದೇ 
ನಿರ್ನಾಮವಾಗುವೆಡೆ ನಿನ್ನನ್ನು ನೆನೆದೆ 
ನಾನಾರು ಎಂದು ನಾ ಅರಿತವನೇ ಅಲ್ಲ 
ನಿನ್ನರಿವ ಹರಿವಲ್ಲಿ ಕಂಡದ್ದೇ ಎಲ್ಲ 

ಅಕ್ಷರ ದೀಪ್ತಿಯಡಿಗತ್ತಲ ಮಸಿ ನಾನು 
ಬೆಳಕೆಂಬೋ ಸತ್ಯವನು ತೋರಿದವ ನೀನು 
ನನ್ನ ಧ್ಯಾನಕೆ ನಿನ್ನ ಒಕ್ಕೊರಲ ರಾಗ 
ನಿನ್ನ ಶೂನ್ಯದ ಒಳಗೆ ನಾನೊಂದು ಭಾಗ 
ಕಡಿದು ಕೊಡು ನನಗೆ ಹೊಸತೊಂದು ರೂಪ 
ಹಠ ಬಿಡದ ಮಗುವಾಗಿ ಬೆರಳನ್ನು ಹಿಡಿವೆ 
ತೇಲಿಸು, ಮುಳುಗಿಸು ನಿನ್ನಂತೆ ನಡೆಸೆನ್ನ 
ನೀ ತೋರುವ ದಾರಿ ನನದೆಂದು ನಡೆವೆ 

ಅವರಿವರು ಯಾರವರು? ನಿನ್ನವರೇ ನನ್ನವರು 
ವರಿಸುವವರೆಲ್ಲ ನಿನ್ನಂತೆ ಅನಿಸುವರು 
ಇದ್ದವರು, ಇರುವವರು, ಇರಲಾಗದುಳಿದವರು 
ಇಂತಿಪ್ಪ ಬದುಕುವುದ ತೋರಿ ಕಲಿಸಿದರು 
ಆಗದವರು ದೂರವಾದವರು ಹೇರಳ 
ಉಸಿರ ಏರಿಳಿಲಿತವನು ಬಲ್ಲವರು ವಿರಳ 
ನೀನೆಂಬ ಮೂಲ ದ್ರವ್ಯದ ಆಳ ತಲುಪಿರುವೆ 
ನೀ ಅರಳಿಸಲು ನಾ ನಗುವ ಕಮಲ 

ಗಡಿಯಿಟ್ಟು ಕಾಯಲು ನೀ ವಾಯು ಆದೆ 
ಗುಡಿ ಕಟ್ಟಿಕೊಳ್ಳಲು ಕಲ್ಲಾಗಿ ಉಳಿದೆ 
ಊರ ಹೊರಗಿಟ್ಟವರ, ಕೋಟೆ ಕಟ್ಟಿಟ್ಟವರ 
ಸಮವಾಗಿಸಿ ನಿನ್ನ ಬೆವರಿಂದ ತೊಳೆದೆ 
ನೆನೆದಲ್ಲೇ ಸಿಗುವಂಥ ಸ್ಮೃತಿಯೊಂದೇ ಸಾಕು 
ಸ್ತುತಿ ಅರಿಯದವರಲ್ಲೂ ನೀ ನೆಲೆಸಬೇಕು 
ಗುರುಭಕ್ತಿಯಿಂದ ಅರ್ಪಿತ ನನ್ನ ನಮನ 
ನಾನೆಂಬುದ ಅಳಿಸಿ ಮಾಡಿಸೈ ಮನನ... 

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...