ಎಷ್ಟೇ ಮಳೆಗರೆದರೂ ಇಳೆಗೆ ಸಾಕಾಗದು
ಎಷ್ಟೇ ಮಿನುಗಿದ್ದರೂ ತಾರೆ ಕೈ ಸೇರದು
ಎಷ್ಟೇ ಮನಸ್ಸಿದ್ದರೂ ಮಳೆಬಿಲ್ಲು ಅಳಿವುದು
ಎಷ್ಟೇ ಒತ್ತಡವಿರಲಿ ಚಿಗುರೊಡೆಯದೆ ತಪ್ಪದು
ಏನೇ ವಿಸ್ತಾರವಿರಲಿ ಅಲೆಗೂ ಕೊನೆಯೊಂದಿದೆ
ಏನೇ ಬಯಕೆಗಳಿರಲಿ ಇಬ್ಬನಿ ಕೊನೆ ಕಾಣದೇ?
ಏನೇ ಸಾಂತ್ವನ ಕೊಡಲು ಕಂಬನಿಯು ಕೇಳದೆ
ಏನೇ ರೇಖೆ ಎಳೆದರೂ ಎಲ್ಲವನ್ನೂ ಮೀರಿದೆ
ಯಾರೇ ತಡೆಯೊಡ್ಡಿದರೂ ಗಂಧಕೆ ಚೌಕಟ್ಟೇ?
ಯಾರೇ ಎದೆ ತಟ್ಟಿದರೂ ಒಲವ ಬಾಬತ್ತೇ!
ಯಾರೇ ಆಲಿಸಲಿ ಹೃದಯ ಹಾಡುವುದು ಮತ್ತೆ
ಯಾರೇ ಒಲವಿಗೆ ಸಿಗಲಿ ಅರಳುವುದು ಕವಿತೆ
ಯಾವ ಬರವಣಿಗೆಗೂ ನಿಲುಕದಂಥ ಪತ್ರ
ಯಾವ ಮುಖವಾಡವೂ ಒಲ್ಲದಂಥ ಪಾತ್ರ
ಯಾವುದೇ ಬಣ್ಣ ನೆಚ್ಚಿ ಕಾಯದಂಥ ಚಿತ್ರ
ಯಾವ ಹಸಿವೇ ಇರಲಿ ನೀಗಿಸುವುದೇ ಮಂತ್ರ
ಎಲ್ಲೇ ಸಾಗಿ ಹೊರಟರೂ ಹಿಂಬಾಲಿಸೋ ಮುಗಿಲು
ಎಲ್ಲೇ ಅಡಗಿ ಕೂತರೂ ಜೊತೆಗುಳಿವ ನೆರಳು
ಎಲ್ಲೇ ನೆಲೆ ನಿಂತರಲ್ಲೊಂದು ಕೊನೆಯ ಹೆಜ್ಜೆ
ಎಲ್ಲೋ ಗಮನ ಸರಿದು ಮಂಕಾಯಿತು ಸಂಜೆ!
No comments:
Post a Comment