Tuesday, 16 September 2014

ಚಿಗುರ ಹಬ್ಬ

ಕತ್ತರಿಸಿದ ಕರುಳಿಗೆ
ಕ್ಲಿಪ್ಪು ಹಿಡಿ ಸಿಕ್ಕಿದ್ದು
ಹಸಿದ ಹೊಟ್ಟೆಗೆ ಈಗ
ನಾಲಗೆಯ ಹಂಗು;
ತಾಯಿಗಿನ್ನೂ ಮಂಪರು,
ಎಳೆ ಬೆರಳ ಚೀಪುತ್ತ
ಹಸುಗೂಸಿನ ಅಳಲು;
ತಾಯೆದೆಯ ಜಿನುಗು!!

ಲೋಕಗಣ್ಣ ತಪ್ಪಿಸಿ
ಸುತ್ತಿಕೊಂಡ ಕೌದಿ
ಬೆತ್ತಲ ಸತ್ಯಗಳ
ಇನ್ನೆಷ್ಟು ಮರೆಸೀತು?
ಬಿಸಿ ಶಾಖದ ಹೊದಿಕೆ
ಇಟ್ಟು ಬೆಚ್ಚಗೆ ಚೂರು
ಹಳದಿ ಹರಡಲುಬಹುದು
ನೀಡದ ಹೊರತು!!

ಅಲುಗದ ಜನನಿ
ಹಾಸಿಗೆಯ ಸವರಿದಳು
ಅಲ್ಲೆಲ್ಲೋ ತಾಯ್ತನದ
ಹಳೆ ಜೋಜೋ ಲಾಲಿ;
ಅಮ್ಮಳಿಂದಮ್ಮಳಿಗೆ
ಮೊದಲ ಹಸ್ತಾಂತರ
ನೋವ ಮರೆತಳು ತಾನು
ತುಂಬು ನಗುವಲ್ಲಿ!!

ಕಣ್ಣು ಯಾರಂತೆ?
ಮೂಗು ಯಾರಂತೆ?
ಬಣ್ಣ ಕೆಂಪು
ಕಿವಿಯ ಆಲೆ ಇದ್ದಂತೆ;
ಸಣ್ಣ ಹುಟ್ಟು ಮಚ್ಚೆ
ಮೊದಲ ಹನಿ ಉಚ್ಚೆ
ಹಾಲು ಗಲ್ಲದ ಗಡಿಗೆ
ಪುಟಾಣಿ ಕವಿತೆಯಂತೆ!!

ಏರು ದನಿ ಅಳಲು
ಅದ ಮೀರಿ ನಿಂತ
ಮೌನ ಅಂಗಳವನ್ನೂ
ನಾಚಿಸುವ ಮೌನ;
ಕಣ್ಣ ಮಸಿ ತಡವಿ
ಅಲ್ಲಲ್ಲಿ ಬೆರಳು
ಗಾಳಿಯಲಿ ಎಡವಿ
ಹಣೆ ಚುಕ್ಕಿ ಬಣ್ಣ!!

ತೊಟ್ಟಿಲಿಗೆ ಸಿಂಗಾರ
ಕತ್ತಲಿಗೆ ಕರ್ಪೂರ
ಪ್ರತಿ ದಿನವೂ ಮನೆ ತುಂಬ
ತುಂಬು ಜಾತ್ರೆ;
ಕಾದ ಹಂಡೆ ನೀರು
ಕೆಂಡ ಆರದ ಒಲೆಯು
ಒಳಗೆ ಬೇಯಲು ಬಿಟ್ಟ
ಬೇವ ಪತ್ರೆ!!

ಸದ್ದೊಂದು ಹಾಡು
ಇರದಿದ್ದರೊಂದು
ಒಟ್ಟಾರೆ ಮನೆಯೊಂದು
ಗಂಧರ್ವ ಲೋಕ;
ಎಳೆ ಪಾದ ಸವರಿ
ಮೈ ಮರೆತ ಜೀವಕೆ
ಹಂತ ಹಂತಕೂ
ಲಭಿಸಿದಂತೆ ಮಧುರ ನಾಕ!!

                  -- ರತ್ನಸುತ

1 comment:

  1. ಮಡಿಲು ತುಂಬಿದ ಆನಂದಕೆ ತಾಯಿಗೆ ತುಂಬಿದ ಭಾವ.

    ReplyDelete

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...