Tuesday, 16 September 2014

ಗಣಪನ ಗುಂಗಲ್ಲಿ

ಮೂಲೆಯಲ್ಲಿ ಧೂಳು ಹಿಡಿದ
ಮೂರು ಕಾಲ ಕುರ್ಚಿ
ಹೊಸಗೆ, ಬಾಡು, ನಿಶ್ಚಿತಾರ್ಥ
ಮುಗಿಸಿ ಬಂದ ಪೆಂಡಾಲು
ಮದುವೆ ಮನೆ, ಊರ ಹಬ್ಬ
ಬೆಳಗಿದ ಸೀರ್ಯಲ್ ಸೆಟ್ಟು
ಹಾಡು ಯಾವುದಾದರೇನು
ಬಾಯಾಗುವ ಸ್ಪೀಕರ್ರು;

ನಾಲ್ಕು ಹಣ್ಣ ತಟ್ಟೆ ಮೇಲೆ
ನೂರು ನೊಣದ ರಾಶಿ
ಕಜ್ಜಿ ನಾಯಿ ಕೆರೆಯುತಿತ್ತು
ರಟ್ಟುಗಟ್ಟಿ ಗಾಯ
ದಾರಿ ಬಂದ್ ಎರಡೂ ಬದಿಯ
ಚಾಲಕರ ಪರದಾಟ
ಕದಿಯಲೇನು ಸಿಗುವುದೆಂದು
ಮಂಗನಿಣುಕು ನೋಟ!!

ಮಂಗಳಾರ್ತಿ ತಟ್ಟೆಯಲ್ಲಿ
ಪುಡಿಗಾಸಿನ ಪಾಡು
ತೊಳೆದು ಸ್ವಚ್ಛಗೊಂಡಿತ್ತು
ಬಿ.ಬಿ.ಎಂ.ಪಿ ರೋಡು
ಕಟ್ಟೌಟುಗಳಲ್ಲಿ ಸ್ಟಾರುಗಳ ನಡುವೆ
ಕಮಂಗಿಗಳು
ದೇವಸ್ಥಾನದ ತುಂಬ
ದಿಂಡು ಮುಡಿದ ಫಿರಂಗಿಗಳು!!

ಗಣಪನ ಕೊಂಡರೆ ಗೌರಿ ಫ್ರೀ
ವ್ಯಾಪಾರ-ವಹಿವಾಟು
ಹೂವು, ಹಣ್ಣು, ಕಾಯಿ, ಕಡ್ಡಿ
ಎಲ್ಲವೂ ಹೈ ರೇಟು
ಹೂರಣಕ್ಕೆ ಬೆಲ್ಲ ಕಡಿಮೆ
ಕಡುಬು ರುಚಿಸುತಿಲ್ಲ
ಖರ್ಚು ಮಾಡಲಿಕ್ಕೆ ತರುವ
ಕಾಸು ಸಾಲುತಿಲ್ಲ!!

ಮಣ್ಣ ಗಣಪ, ಬಣ್ಣ ಗಣಪ
ಸುಣ್ಣ ಗಣಪ, ಕಲ್ಲು ಗಣಪ
ಎಲ್ಲ ಗಣಪರಿಗೂ ಒಂದು
ದೀರ್ಘ ದಂಡ ನಮನ;
ಜಿಮ್ಮು ಸೇರಿ ಮಾಡು ಚೂರು
ಎಕ್ಸರ್ಸೈಸು-ಗಿಕ್ಸಸೈಸು
ಇನ್ನೂ ಹೆಚ್ಚು ಸೂರೆಗೊಳುವೆ
ಭಕ್ತೆಯರ ಗಮನ!!

                    -- ರತ್ನಸುತ

1 comment:

  1. ಗಣಪನೂ ಇತ್ತೀಚೆಗೆ ಬೇಜಾನ್ commecial item ಅಲ್ಲವ್ರಾ!

    ReplyDelete

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...