Tuesday, 16 September 2014

ಮೆಟ್ರೋ ಸಿಟಿಯಲ್ಲಿ

ನಾಲ್ಕು ದಿಕ್ಕಿನಿಂದ ನುಗ್ಗಿ
ಜಾಮಾದ ರೋಡಿನಲ್ಲಿ
ಟ್ರಾಫಿಕ್ ದೀಪಗಳ 
ವಿರಾಗಮಾನ ವರ್ತನೆ;
ಝೀಬ್ರಾ ಕ್ರಾಸಿಗಿಷ್ಟೂ
ಬೆಲೆಯ ಕೊಡದ ಟ್ರಕ್ಕುಗಳು
ಪಾದಚಾರಿ ಜಿಗಿಯ ಬೇಕು
ಬ್ಯಾರಿಕೇಡ ಮೆಲ್ಲನೆ!!

ಲೆಫ್ಟು, ರೈಟು ಸಿಕ್ಕ ಸಿಕ್ಕ
ದಿಕ್ಕಿನಲ್ಲಿ ಓವರ್ಟೇಕು
ಕಿಲೋಮೀಟರ್ ದೂರದಲ್ಲಿ
ಆಕ್ಸಿಡೆಂಟು ಖಾತರಿ;
ಹೆಲ್ಮೆಟ್ಟು ಧರಿಸದವರ
ಫುಟ್ಪಾತು ಏರಿದವರ
ಡಾಕ್ಯುಮೆಂಟ್ಸು ಇಲ್ಲದವರ
ಜೇಬಿಗಿಷ್ಟು ಕತ್ತರಿ!!

ಎಲ್ಬೋರ್ಡ್ ಆಮೆ ಗತಿಯ
ಸಹಿಸಲಾಗದಂಥ ಗೋಳು
ಓವರ್ ಸ್ಪೀಡಿನಲೇ
ಅಂತ್ಯಗೊಂಡ ಬಾಳು;
ಆಟೋ ಹಿಂದೆ ಬರೆದ
ಚಂದ-ಚಂದ ಅಕ್ಷರ
ಆಂಬ್ಯುಲೆಂಸುಗಳ ಪಾಡು
ರೋಗಿ ಸ್ಥಿತಿ ಭೀಕರ!!

ಅನ್ಯ ರಾಜ್ಯ ನಂಬರ್ ಪ್ಲೇಟು
ನಮ್ಮ ಭಾಷೆ ನಮಗೆ ಗ್ರೇಟು
ಕನ್ನಡದಲಿ ಬರೆದುಕೊಂಡ್ರೆ
ರೂಲ್ಸು ಅಡ್ಡ ಬರ್ತವೆ;
ಫ್ಲೈ ಓವರ್ ಕಟ್ಟಿ ಆಯ್ತು
ಮೆಟ್ರೋ ರೈಲು ಓಡಿದ್ದಾಯ್ತು
ಆದ್ರೂ ನಮ್ಮ ಬೆಂಗಳೂರ
ಗೋಳು ತೀರಲಿಲ್ಲವೆ!!

ಹೊಗೆ ಧೂಳು ಮಿಕ್ಸಾಗಿ
ಖಾಯಿಲೆಗಳು ಫಿಕ್ಸಾಗಿ
ಆಸ್ಪತ್ರೆ ಸೆರ್ವಿಸ್ಸು
ಟೋಂಟಿಫೋರ್ ಬಾರ್ ಸೆವೆನ್;
ಎಗ್ಗಿಲ್ಲದೆ ಸೇಲಾದವು
ಮೆಡಿಕಲ್ಸಲಿ ಮಾತ್ರೆಗಳು
ಮುದ್ದೆ ಊಟ ಬಿಟ್ಟು ತಿಂದ್ರೆ
ಚೀಸ್, ಜಾಮ್, ಬಟರ್, ಬನ್!!

ಅಪಾರ್ಟ್ಮೆಂಟ್ಸ್ ತೆಲೆಯೆದ್ದವು
ಕೆರೆ-ಕುಂಟೆ ಲೇಯೌಟ್ಗಳು
ರಾಜ ಕಾಲುವೆಗಳಲೀಗ
ಚರಂಡಿ ನೀರ ಕೋಡಿ;
ರಿಯಲ್ ಎಸ್ಟೇಟು ದಾಳಿ
ಹೊಲ-ಗದ್ದೆ ಡೀಲೋ ಡೀಲು
ಇಂದು ರಾಜನಾಗಿ ಮೆರೆದು
ನಾಳೆ ಡೆಡ್ಡು ಬಾಡಿ!!

ನೂರೆಂಟು ಚಾನಲ್ಗಳು
ರಾಜಕೀಯ ನ್ಯೂಸೆಂಸ್ಗಳು
ಇನ್ನೊಂದೆಡೆ ಐ.ಟಿ ಕಂಪನಿಗಳ
ಮೆರೆದಾಟ;
ಮೊಬೈಲ್ ಸಿಕ್ಕ ಕೈಗಳಿಗೆ
ಸ್ಲೇಟು ಬಳಪ ಮರ್ತೋಯ್ತು
ಮೊಮ್ಮಕ್ಕಳ ಪ್ರೀತಿಗಾಗಿ
ಮುದುಕರ ಹೋರಾಟ!!

ಬೀದಿ ಬೀದಿ ದೇವರು
ಹಸ್ತ ನುಂಗುವವರ ನೂರು
ಜೋತಿಷ್ಯ, ಹಣೆ ಬರಹ
ಕೊಳೆತು ನಾರೋ ತಿಪ್ಪೆ;
ಇಂಜೆಕ್ಷನ್ ತರಕಾರಿ
ಹಣ್ಣು, ಮಾಂಸವೆಲ್ಲವೂ
ಶುಗರ್ ಬೆನ್ಹತ್ತಿದರೆ
ಬಾಳು ಕಬ್ಬ ಸಿಪ್ಪೆ!!

ಡೇ ಮುಗಿದರೆ ನೈಟ್ ಲೈಫ್
ದುಡ್ಡಿದ್ದರೆ ನಾವ್ ಸೇಫ್
ಹಿಸ್ಟರಿ ಹಾಳೆಗಳು
ಓದುವಾಗ ಬಾರ;
ಚಾಪೆ ಅಷ್ಟಗಲ
ತೇಪೆ ಹಾಕಿದ ಬದುಕು
ನಾಳೆಯ ನೆನೆದರೆ ಕೆಡುವುದು
ಇಂದಿನ ಗ್ರಹಚಾರ!!

                   -- ರತ್ನಸುತ

1 comment:

  1. ಸೂಪರ್... ಸೂಪರ್...
    City ಬಗ್ಗೆ ಶೀಟಿ ಹೊಡರಯುವಂತಹ ಕವನವಿದು.

    ReplyDelete

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...