Tuesday, 16 September 2014

ತೊದಲು ಹೆಜ್ಜೆ

ಕಣ್ಣ ರೆಪ್ಪೆ ಮೇಲೆ ಕನಸ
ಮರೆತು ಬಿಟ್ಟು ಹೋದ ನಿನ್ನ
ಎಲ್ಲಿ ಅಂತ ಹುಡುಕ ಬೇಕೋ
ತಿಳಿಯದಲ್ಲೇ ರೂಪಸಿ;
ಒಂಟಿಯಾಗಿ ಎಷ್ಟು ದಿವಸ
ನಂಟ ಊಹೆಗೈಯ್ಯುತಿರಲಿ?
ಬೆಸೆದುಕೊಳ್ಳ ಬೇಕು ಈಗ
ಉಳಿಯಬೇಡ ಕಾಯಿಸಿ!!

ಕಪ್ಪು ಕುರುಳಿಗೊಪ್ಪುವಂಥ
ಕೇಶಬಂಧಿ ಕೊಂಡು ತರುವೆ
ಗಲ್ಲವನ್ನು ಇನ್ನು ಮುಂದೆ
ಯಾರೂ ಕೂಡ ಕೆಣಕರು;
ಕೆಣಕುವಾತನೊಬ್ಬ ನಾನು
ಉಳಿಯಲಾರದಷ್ಟು ದೂರ
ನನ್ನ ಈ ಗೋಳು ಕಥೆಯ
ಯಾರು ತಾನೆ ಬಲ್ಲರು?!!

ಸಂತೆ ಬೀದಿಯಲ್ಲಿ ನೀನು
ಹಾದು ಹೋದ ಸುದ್ದಿಯನ್ನು
ಸೋಕಿ ಬಿಟ್ಟ ಸೋರೆಕಾಯಿ
ಸಾರಿ ಸಾರಿ ಹೇಳಲು;
ಯಾವ ಮರದ ನೆರಳು ಕೂಡ
ಹಿತವ ನೀಡುವಂತೆ ಇಲ್ಲ
ಇದ್ದ ದುಃಖವೆಲ್ಲವನ್ನು
ಹಂಚಿ ಒರಗಿಕೊಳ್ಳಲು!!

ಸೀಮೆ ಹಾಕಿಕೊಳ್ಳಲಿಲ್ಲ
ಬಾಗಿಲನ್ನೂ ಇರಿಸಲಿಲ್ಲ
ಮನದ ಮಾರು ದೂರದಲ್ಲಿ
ಒಂದು ಮಲ್ಲೆ ಗಿಡವಿದೆ;
ಅಡ್ಡಿ ಆಗಬಾರದೆಂದು
ಪಳೆಯುಳಿಕೆ ಗೆಳತಿಯರ
ನೆನಪುಗಳ ಬುಡ ಸಮೇತ
ಕಿತ್ತು ಹಾಕಿ ಕೆಡವಿದೆ!!

ಗಟ್ಟಿಯಾಗಿ ಇಟ್ಟು ಕರೆದೆ
ನಿನಗಿಟ್ಟ ಅಡ್ಡ ಹೆಸರ
ಕೇಳದಂತೆ ಸುಳ್ಳೆ ನೀನು
ನಟನೆ ಮಾಡ ಕೂಡದು;
ಉಸಿರುಗಟ್ಟಿದಾಗ ಕೂಡ
ನಿನ್ನ ನೆನಪ ಮಾಡಿಕೊಂಡೆ
ಯಾವ ದಿವ್ಯ ಶಕ್ತಿ ನಿನದು?
ಪ್ರಾಣ ಕೈಯ್ಯ ಮುಗಿವುದು!!

ದಿಂಬಿನಡಿಗೆ ಇಟ್ಟ ಕವನ
ನಿನ್ನ ಎಡೆಗೆ ಒಂದು ಹೆಜ್ಜೆ
ಸಾಲು ಸಾಲು ಗೀಚಿಕೊಂಡು
ನಿನ್ನ ಮನವ ತಲುಪುವೆ;
ಇನ್ನೂ ಹೆಚ್ಚು ಬರೆದುಕೊಳಲು
ಖಿನ್ನತೆ ಕಾಡಬಹುದು
ಇಷ್ಟು ಹೇಳಿ ನನ್ನ ಎರಡು
ಮಾತುಗಳನು ಮುಗಿಸುವೆ!!

                  -- ರತ್ನಸುತ

1 comment:

  1. ಅವಳ ಬಗ್ಗೆ ನಲ್ಲನಿಗೆ ಸಾವಿರ ಕವನಗಳನು ಬರೆದರೂ ಖಾಲಿಯಾಗದು ಬತ್ತಳಿಕೆ.

    ReplyDelete

ಹೃದಯವ ನೀಡಲೇ

ಹೃದಯವ ನೀಡಲೇ ಹೇಳದ ಮಾತಿವೆ ನೂರಾರು ಆಲಿಸು ಈಗಲೇ ಪಾಲಿಸಿ ನಿನ್ನಯ ನೆರಳನು ಹೃದಯವ ನೀಡಲೇ ಹೊಂಗನಸ ಅಂಗಳದಿ ಅರಳಿರುವ ಚಂದಿರ ನೀ  ಯಾರಿರದ ತೀರದಲಿ ಅಲೆಗಳಲೂ ನಿನ್ನ ದನಿ  ...