Tuesday, 16 September 2014

ನಾನು ನಾನಾಗಿ

ಬೆವರ ಹಿಡಿದು ಗೀಚಿಕೊಂಡೆ,
ಗೆರೆ ಇದ್ದಲ್ಲೇ ಹಿಂಗಿ ಹೋಯಿತು;
ಕವಿತೆ ಎಲ್ಲಿ? ಎಂದು ಕೇಳಿದವರು
ಮೂಗು ಮುಚ್ಚಿಕೊಂಡಾಗ
ಓದಿಸಿಕೊಳ್ಳಲು ಅಸಮರ್ಥವಾಯಿತೆಂದು
ಬೇಸರದಲ್ಲಿ ಮತ್ತೆ ನಾನೇ ಓದಲು ಮುಂದಾದೆ;
ನನ್ನ ಕಂಪು ನನ್ನನ್ನೇ ಛೇಡಿಸುವಂತೆ
ಅಕ್ಷರಗಳ ಮರೆಸಿಟ್ಟಿತು!!

ನೀರ ಮೇಲೆ ಬರೆದೆ;
ಯಾವ ಹರಿವಿನ ಹಂಗೂ ಇಲ್ಲದ
ಸ್ತಬ್ಧ, ತಟಸ್ಥ ಭಾವವ ತೊರೆದು
ತರಂಗಗಳ ಮೇಲೆ ತೇಲಿ
ಆ ದಡ, ಈ ದಡ ಮುಟ್ಟುಗೋಲು ಹಾಕಿ
ಅಲೆಮಾರಿಗಳಂತಾದ ತುಂಡಕ್ಷರಗಳು
ಕೊನೆಗೆ ನನ್ನ ಕಾಲನ್ನೇ ಮುಟ್ಟಿದಾಗ
ಕುಸಿದು ಬಿದ್ದೆ!!

ಯಾರೋ ಸೂಚಿಸಿದಂತೆ
ಕಣ್ಣೀರ ಬಸಿದೂ ಬರೆದದ್ದಾಯ್ತು;
ಪದ್ಮ ಪತ್ರೆಯ ರೀತಿ
ಹಾಳೆ ಅಂಟಲುಗೊಡದೆ
ತಾನೂ ಕಣ್ಣೀರಿಟ್ಟಂತೆ
ಎಲ್ಲವನ್ನೂ ಕೈ ಚೆಲ್ಲಿ ನಿಂತಿತು;
ಓದುಗರ ಎದುರುನೋಟಕ್ಕೂ
ಎಳ್ಳು-ನೀರೆರೆದು!!

ಗುರುತು ಉಳಿಯಬೇಕಾದರೆ
ನೆತ್ತರೇ ಸರಿ ಶಾಯಿಯೆಂದುಕೊಂಡೆ,
ಎಗ್ಗಿಲ್ಲದೆ ಹರಿಸುತ್ತಿದ್ದ ಕಸಾಯಿಗಳ ಮೊರೆ ಹೋದೆ;
ಹೆಗ್ಗುರುತಾಗಿ ಎದ್ದೆದ್ದು ಕುಣಿಯುತ್ತಿದ್ದ ಸಾಲುಗಳು
ಒಮ್ಮೊಮ್ಮೆ ನನ್ನನ್ನೇ ಬೆಚ್ಚಿ ಬೀಳಿಸುತ್ತಿದ್ದವು;
ಮಸಿ ಮೆತ್ತಿದ ಕೈ ತೊಳೆದು
ಎಲ್ಲವನ್ನೂ ಬಿಟ್ಟು ದೂರ ಸಾಗಿ ಬಂದೆ!!

ಅಂದು ನಾ ಓದಿಸಬೇಕಿದ್ದವರಿಗೆ
ಓದಿಸಲಾಗದೆ ಕುಗ್ಗಿ ಹೋಗುತ್ತಿದ್ದೆ,
ಇಂದು ಎಲ್ಲವನ್ನೂ ಓದುವಂತವರಾಗಿದ್ದಾರೆ
ಆದರೆ ನಾ ಇನ್ನೂ ಏನನ್ನೂ ಬರೆದವನಲ್ಲ;
ಹಾಗಾದರೆ ಅವರು ಓದುತ್ತಿರುವುದು ನನ್ನನ್ನೇ?
ಇದ್ದರೂ ಇರಬಹುದು, ಯಾಕಂದರೆ
ಈಗ ನಾನು ನಾನಾಗಿದ್ದೇನೆ!!

                                     -- ರತ್ನಸುತ

1 comment:

  1. ನಿಜ ಕವಿತೆಯು ಅಸಲಿ ಕವಿಯನು ತೋರುವ ಕೈಗನ್ನಡಿ.

    ReplyDelete

ಹೃದಯವ ನೀಡಲೇ

ಹೃದಯವ ನೀಡಲೇ ಹೇಳದ ಮಾತಿವೆ ನೂರಾರು ಆಲಿಸು ಈಗಲೇ ಪಾಲಿಸಿ ನಿನ್ನಯ ನೆರಳನು ಹೃದಯವ ನೀಡಲೇ ಹೊಂಗನಸ ಅಂಗಳದಿ ಅರಳಿರುವ ಚಂದಿರ ನೀ  ಯಾರಿರದ ತೀರದಲಿ ಅಲೆಗಳಲೂ ನಿನ್ನ ದನಿ  ...