Tuesday, 16 September 2014

ಕಣ್ಣ ಹೊರಗಿನ ಕನಸುಗಳು

ಗುರುತಿನ ಚೀಟಿ ಮರೆತು ಬಂದ
ರಾತ್ರಿ ಪಾಳಿ ಕನಸುಗಳಿಗೆ
ಕಣ್ಣು ನಿಷೇಧ ಹೇರಿತ್ತು;
ಎಲ್ಲವೂ ಬಾಗಿಲಲ್ಲೇ ಕುಳಿತು
ಅಲ್ಲೇ ತುಸು ತೂಕಡಿಸಿ
ಸ್ಥಿತಿ ಪ್ರಜ್ಞೆ ಮರೆತು, ಮೈ ಹರಡಿಕೊಂಡು
ಕಣ್ಸುತ್ತಾಗಿ ಕಾಡುತ್ತಿವೆ!!

ರಾತ್ರಿಯೆಲ್ಲ ಬಿಡದ ಮಳೆ
ಇಳೆಯನ್ನೆಲ್ಲ ತಬ್ಬಿ ಹಸಿಯಾಗಿಸಿದರೂ
ದಣಿದ ನಾಲೆಗೆಗೆ ಎಲ್ಲವೂ ಅಪ್ರಸ್ತುತ;
ಕನಸಲ್ಲಿ ಮಾತಾಡಿಕೊಂಡದ್ದೆಲ್ಲ
ಕತ್ತಲಲ್ಲಿ ಲೀನವಾಗಿ ಹೋದದ್ದು
ಮಳೆ ನೀರು ಕೋಡಿಯಾಗಿ ಕೊಚ್ಚಿಹೋದದ್ದು
ಗೌಪ್ಯ ಸ್ಥಳಕ್ಕೆ!!

ಮಂಪರುಗಣ್ಣ ತೆರೆದಾಗ
ಕನಸಿನ ಆ ಕೊನೆಯ ಚಿತ್ರಣ
ಕಣ್ಮುಂದೆ ಅರಳಿ, ಉದುರಿ ಬೀಳುತ್ತೆ
ಇದ್ದ ಗೊಂದಲಕ್ಕೆ ಮತ್ತೊಂದ ಸೇರಿಸಿ;
ಈಗ ಮತ್ತೆ ಎಲ್ಲವನ್ನೂ ಮರುಕಳಿಸುವ
ಪ್ರಯತ್ನ ಸಾಗಿದೆಯಾದರೂ
ಎಲ್ಲವೂ ಅಸ್ಪಷ್ಟವಾಗಿವೆ, ಕಷ್ಟವಾಗಿವೆ!!

ಕನಸ ಪಾತ್ರಧಾರಿಗಳ ಹೆಸರು
ಅಲ್ಲಲ್ಲಿ ಬಿಡಿ ಅಕ್ಷರಗಳಾಗಿ ಹೊಳೆಯುತ್ತವೆ;
ಜೋಡಿಸುತ್ತ ಕೂತರೆ ಕೆಲಸ ಸಾಗದು
ಮನಸಿಗೆ ಬಂದ ಹೆಸರಿಟ್ಟರೆ
ಪಾತ್ರಗಳು ಮುಂದಕ್ಕೇ ಸಾಗದೆ ನಿರ್ಲಿಪ್ತವಾಗುತ್ತವೆ;

ಕಣ್ಣು ತುಂಬಿ ಬಂದಾಗಲೆಲ್ಲ
ಹೊರಗೆ ಕಾದ ಕನಸುಗಳು ಎಚ್ಚೆತ್ತು
ಒಳಗೆ ಹೊಕ್ಕವೋ ಎಂಬಂತೆ
ದಿಢೀರ್ ತಲಣದ ಕ್ಷಣ;
ಹಿಂದೆಯೇ ನೀಳ ಮೌನ!!

ಹಾಸಿಗೆ ಎಲ್ಲವನ್ನೂ ಹೇಳಲಾಗದೆ
ನಿಸ್ಸಹಾಯಕವಾಗಿ ಚಾಚಿತ್ತು
ಅಂತೆಯೇ ತಲೆ ದಿಂಬೂ ಸಹ;
ಕನಸುಗಳ ಸರತಿಯಲ್ಲಿ
ಕಣ್ಣು ಪೊರೆಗಟ್ಟುವ ಮುನ್ನ
ಕರಗುವ ಉಮ್ಮಸ್ಸಿನಲ್ಲಿದೆ!!

                                             -- ರತ್ನಸುತ

1 comment:

  1. ಕನಸ ಪಲ್ಲಕಿ ಹೊರಡೋ ನಿಶೆ ರಾತ್ರಿ ನಿದುರೆಗೆ ಸುಸ್ವಾಗತ.

    ReplyDelete

ಹೃದಯವ ನೀಡಲೇ

ಹೃದಯವ ನೀಡಲೇ ಹೇಳದ ಮಾತಿವೆ ನೂರಾರು ಆಲಿಸು ಈಗಲೇ ಪಾಲಿಸಿ ನಿನ್ನಯ ನೆರಳನು ಹೃದಯವ ನೀಡಲೇ ಹೊಂಗನಸ ಅಂಗಳದಿ ಅರಳಿರುವ ಚಂದಿರ ನೀ  ಯಾರಿರದ ತೀರದಲಿ ಅಲೆಗಳಲೂ ನಿನ್ನ ದನಿ  ...