Tuesday, 16 September 2014

ಇದೊಂದು ಪದ್ಯ

ಪದ್ಯ ಹೊಳೆಯದಿದ್ದಾಗ
ಹೊಳೆಯಲಾರದ್ದೇ ಪದ್ಯವಾಗಿದ್ದು
ಪದ್ಯದ ವೈಶಿಷ್ಟ್ಯತೆಯೋ
ಅಸಹಾಯಕತೆಯೋ ಗೊತ್ತಿಲ್ಲ;
ಆದರೆ ಪದ್ಯ ಮಾತ್ರ ಹುಟ್ಟಿತು!! //ಊಹೆ//

ಹಸಿವಿಲ್ಲದಿದ್ದರೂ ಹೊತ್ತೊತ್ತಿಗೆ
ಹಿಟ್ಟು ತೊಳೆಸಿಕ್ಕುವ ತಾಯಿಯಂತೆ,
ಭೂಮಿ ಕರೆಯದಿದ್ದರೂ ಹುಟ್ಟುವ ಬೆಳಕಂತೆ,
ಕಾಲ ಕಲಕ್ಕೆ ಭೋರ್ಗರೆವ ಮಳೆಯಂತೆ
ಕವಿತೆ ತನ್ನಲ್ಲೇ ಒಬ್ಬ ಕವಿಯನ್ನ ಎಚ್ಚರಿಸುತ್ತ
ತಾನಾಗೇ ಹೊರಹೊಮ್ಮುವ ಸ್ವಯಂ ಚೇತನವೋ?
ಅಥವ ಕೇವಲ ಬರಹಗಾರನ ಭ್ರಮೆಯೋ?
ಊಹೆಗೆ ನಿಲುಕದ ವಸ್ತುವಾಗುತ್ತದೆ ಒಮ್ಮೊಮ್ಮೆ!!

ಹೇಗೆ ಬರೆಯಬಹುದು
ಹೇಗೆ ಬರೆಯಬಾರದು ಎಂಬ
ಕಟ್ಟುಪಾಡಿನಾಚೆಯೂ
ಒಂದು ವಿಕಲ ಚೇತನ ಕಾವ್ಯದ ಜನನ
ಮತ್ತದರ ಅಪೂರ್ಣತೆಯ ಅಳಲು
ಕಣ್ಣಿಗೆ ಸಾಗರವನ್ನೇ ಪರಿಚಯಿಸುತ್ತದೆ;
ಅದು ಹೀಗೆ ಬಂದೆಲ್ಲವನ್ನೂ ಕೊಚ್ಚಿ
ಹಾಗೆ ಮುಗ್ಧವಾಗುವ ಸುನಾಮಿಯಂತೆ!!

ತಲೆ, ಬುಡ, ಆಕಾರವಿಲ್ಲದವು
ಶಪಿಸಿದ ಫಲವೋ ಎಂಬಂತೆ
ಕೆಲ ಬಾರಿ ಬಣ್ಣದ ಗರಿ ತಾಳುವ ಕವಿತೆಗಳು
ಕೆಲವೇ ಕ್ಷಣಗಳ ಬಳಿಕ ಬೋಳಾಗಿ ನಿರ್ಜೀವವಾದಾಗ
ಶೀರ್ಷಿಕೆ ಗೋರಿ ಕಲ್ಲಿನ ಹೆಸರಂತನಿಸುವುದು,
ನಗು ಮೆತ್ತಿದ ಹೆಣ
ಮನಸಲ್ಲಿ ಹುದುಗಿ ಹೋಗಲು
ಸ್ಥಳವಿಲ್ಲದ ಸ್ಥಳದಲ್ಲಿ ಗುಣಿ ತೋಡಿದಂತನಿಸುವುದು!!

ಇದಿಷ್ಟನ್ನೂ ಕೂಡಿಸಿ ಬರೆದರೆ
ಗದ್ಯಕ್ಕೂ ಹುಚ್ಚು ಹಿಡಿಸಬಲ್ಲ ಪದ್ಯದಂತೆ ಕಾಣುವ-
ಅಲ್ಲದ ಪದ್ಯಕ್ಕೆ ಹೆಸರಿಡದಿದ್ದರೆ
ಇದು ಪದ್ಯವೇ ಎಂದು ವಾದಿಸುವ
ನನ್ನ ಅಹಂ ಇನ್ಯಾವತ್ತೂ
ನನ್ನ ನಾನಾಗಿಸಲೊಲ್ಲದು;
ಅದಕ್ಕಾಗಿಯೇ ಇದನ್ನ ಪದ್ಯ/ಕವಿತೆ/ಕವನ ಇತ್ಯಾದಿ ವರ್ಗಕ್ಕೆ ಸೇರಿಸುತ್ತೇನೆ;
ಸಾಧ್ಯವಾದರೆ ಮುಂದೊಮ್ಮೆ
ನಿಧಾನವಾಗಿ ಆತ್ಮಾವಲೋಕನವಾದೀತು.. //ಊಹೆ//

                                                                        -- ರತ್ನಸುತ

1 comment:

  1. ಕವಿಯ ಭಾವಕ್ಕೆ ಒಲಿದೂ ಒಲಿದಂತೆ ಆಟವಾಡಿಸುತ್ತೆ ಪದ್ಯ!

    ReplyDelete

ಹೃದಯವ ನೀಡಲೇ

ಹೃದಯವ ನೀಡಲೇ ಹೇಳದ ಮಾತಿವೆ ನೂರಾರು ಆಲಿಸು ಈಗಲೇ ಪಾಲಿಸಿ ನಿನ್ನಯ ನೆರಳನು ಹೃದಯವ ನೀಡಲೇ ಹೊಂಗನಸ ಅಂಗಳದಿ ಅರಳಿರುವ ಚಂದಿರ ನೀ  ಯಾರಿರದ ತೀರದಲಿ ಅಲೆಗಳಲೂ ನಿನ್ನ ದನಿ  ...