Tuesday, 16 September 2014

ಅವಳು ಮತ್ತು ನಾನು

ಅವಳ ಕೈಯ್ಯ ಚೆದುರಿದ ಗೋರಂಟಿ
ನನ್ನ ಬೆರಳಿಗೆ ತಿಳಿದ ಗುಟ್ಟು
ಅವಳ ಕಣ್ಣಿನ ಒಟ್ಟಾರೆ ಕನಸುಗಳು
ನನ್ನ ಈ ತನಕ ಗಳಿಕೆ ಸ್ವತ್ತು

ಅವಳ ತುದಿ ಉಗುರ ನಳಿನ ನರ್ತನಕೆ
ನನ್ನ ಬೆನ್ನಿದೋ ಪ್ರತ್ಯಕ್ಷ ಸಾಕ್ಷಿ
ಅವಳ ಕಿರು ನಗೆಯ ಕಾಡು ನೆರಳಿನಲಿ
ರಕ್ಷೆ ಪಡೆದ ನಾ ಚಾತಕ ಪಕ್ಷಿ

ಅವಳ ಗುಂಡಿಗೆಯ ಒಂದು ಗೊಂದಲಕೆ
ನನ್ನ ಎದೆಯಲ್ಲಿ ಸಾವಿರ ಕಂಪನ
ಅವಳ ಮೌನವನು ಓದುವಾತುರದಿ
ನನ್ನದಾಯಿತು ಧನ್ಯತಾ ಜೀವನ

ಅವಳ ಚಾರಣಕೆ, ಮಧುರ ಗಾಯನಕೆ
ನನ್ನ ನೆರಳ, ಕೊರಳ ಕಾವಲು
ಅವಳ ಮಾನ್ಯತೆ ನನ್ನ ಪೂರ್ಣತೆ
ಅಲ್ಪನಾಗುವೆ ಬಿಟ್ಟು ಬಾಳಲು

ಅವಳ ನೆನೆಯಲು ಒಂದು ಅಮಲು
ಯುದ್ಧವಾದರೂ ಅವಳ ಸಲುವೇ
ಅವಳು ಹವಳಕೆ ಸಂಧ ಉಪಮೆ
ಚಂದ್ರನಾದರೂ ರದ್ದಿ ಕಸವೇ

ಅವಳು ಅಮೃತವೀವ ಕಡಲ ಶಕ್ತಿ
ಅನುಕರಿಸಲಾಗದಚ್ಚರಿ ಕವನ
ಅವಳ ಹೋಲುವವಳೊಬ್ಬಳು ಅವಳೇ
ಕ್ಷಣವೂ ನಿಲ್ಲದ ಆತ್ಮದ ಮನನ!!

                             -- ರತ್ನಸುತ

1 comment:

  1. ತನ್ನೊಳ ಪ್ರಕಂಪನಗಳಿಗೆಲ್ಲ ಮೂಲವಾಗುವ ಅಚ್ಚರಿ ಆಕೆ. ಇರಲಿ ಈ ಕಂಪನ ಸದಾ ಜೀವನದ ಭಾಗವಾಗಿ.

    ReplyDelete

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...