ಅಕ್ಕರೆ ಮಳೆಗರೆದು ಮಾತನಾಡಿಸುವವಳು
ಅಪ್ಪನ ಪೆಟ್ಟಿನಿಂದ ಪಾರಾಗಿಸಿದವಳು
ನಗುವಲ್ಲೇ ನೋವ ದೂರಾಗಿಸಿದವಳು
ತನ್ನನ್ನೂ ಮೀರಿದಾಗ ಆನಂದಿಸುವವಳು
ಅವಳೇ ಅಮ್ಮ, ನನ್ನಮ್ಮ...
ಊದುಗೊಳವೆಯನ್ನೂ ಮಾತಿಗೆಳೆವವಳು
ಕಾದು ದಾರಿಯನೇ ಸಾಕಾಗಿಸುವವಳು
ಹೊರಳು ಕಲ್ಲಿಗೆ ಎದೆ ಭಾರವ ಇಳಿಸಿದಳು
ಸೆರಗಂಚಲೆಲ್ಲವ ಕಟ್ಟಿಟ್ಟುಕೊಳ್ಳುವಳು
ಅವಳೇ ಅಮ್ಮ, ನನ್ನಮ್ಮ...
ಹಳೆಯ ಕಾಲದ ಸೀರೆ ಹೊಸತೆನ್ನುವಳು
ಮಾಸಿದ ಬಣ್ಣವ ನೆನೆದು ನೀರಾಗುವಳು
ಸುಕ್ಕುಗಳನೆಣಿಸದೆ ಸ್ವಂತವಾಗಿಸಿದವಳು
ಮೌನದಲೇ ಆಗಾಗ ಹಾಡನೂ ಗುನುಗುವಳು
ಅವಳೇ ಅಮ್ಮ, ನನ್ನಮ್ಮ...
ಕೂಡಿಟ್ಟದ್ದೆಲ್ಲವ ಕೊಡುವುದೇ ಹಿತವೆನುವಳು
ಆಸೆಯ ಶಿಖರಕ್ಕೆ ಸಿಡಿ ಮದ್ದು ಸಿಡಿಸುವಳು
ಮಳೆಯ ಮುನ್ಸೂಚನೆ ನಿಖರವಾಗಿ ಗ್ರಹಿಸುವಳು
ಮನೆಯ ಕಷ್ಟಗಳನ್ನು ಹೇಗೋ ನಿಗ್ರಹಿಸುವಳು
ಅವಳೇ ಅಮ್ಮ, ನನ್ನಮ್ಮ...
ತನಗೊಲಿದ ಸುಖದಲ್ಲಿ ತವರಿಗೆ ಪಾಲಿಡುವಳು
ಅವರವರ ಎಣಿಕೆಯನು ಇಣುಕಿನಲ್ಲಿ ಹಿಡಿವಳು
ಯಾರಿಗೂ ಕಾಣದಂತೆ ಒಳಗೊಳಗೇ ಕುಣಿವಳು
ಎಲ್ಲರೆದುರು ದೃತಿಗೆಡದೆ ತೆರೆ ಮರೆಯಲಿ ಅಳುವಳು
ಅವಳೇ ಅಮ್ಮ, ನನ್ನಮ್ಮ...
No comments:
Post a Comment