ಏಕೆ ಮಾಗಿದ ಎಲೆ ಉದುರುವುದು ಈ ಪರಿ
ಮಾತು ಮುಗಿಸಿದ ಮನ ಮರುಗುವುದು ಈ ಪರಿ
ಸಂತೆಯಲಿ ಸಿಗುವ ಮುಖ ಏಕಾಂತದಲಿ ಸಿಗದೆ
ಕನಸಿನಲೂ ಹಿಂಜರಿದು ಕಾಡುವುದು ಈ ಪರಿ
ಹಿಡಿತಕ್ಕೆ ಕೈಯ್ಯೊಡ್ಡಿ, ಉಂಗುರಕೆ ಬೆರಳೊಡ್ಡಿ
ಬದುಕಿಗೆ ಸಿಗದಂತೆ ಓಡುವುದು ಈ ಪರಿ
ಕಣ್ಣು ಕಣ್ಣಿನ ನಡುವೆ ಸೇತುವೆಯ ಕಟ್ಟಿಯೂ
ದಾಟಿ ಬರದೆ ದೂರ ಉಳಿವುದು ಈ ಪರಿ
ತವಕದಿಂದೆರಗಿದರೂ ನಿರ್ಭಾವ ಸ್ಥಿತಿ ತಲುಪಿ
ಮಿಡಿಯದ ಎದೆ ನೀರವತೆ ಇದು ಈ ಪರಿ
ನೀಲಿ ಆಗಸದಲ್ಲಿ ಬಿಳಿ ಶಾಯಿಯ ಬರಹ
ಮುಗಿವಷ್ಟರಲ್ಲಿ ಇರುಳು ಕವಿದು ಈ ಪರಿ
ಹಗುರಾಗಲು
ಉಸಿರ ಹಂಗು ತೊರೆದ ಒಡಲು
ನಿಟ್ಟುಸಿರನಿಡಲು ಪರಿತಪಿಸಿಹುದು ಈ ಪರಿ
ವಿರಹದಲಿ ವಿಹರಿಸಲು ಮುರಿದ ಹಡಗಲಿ ಕೂತು
ರುದ್ರ ಅಲೆಗಳು ಸಂವಹಿಸುವುದು ಈ ಪರಿ
No comments:
Post a Comment