Thursday 11 June 2020

ಗಝಲ್ (ಸುಟ್ಟ ಗಾಯ ಸುಟ್ಟಾಗಿಗಿಂತ ನಂತರಕೆ ತಾ ನೋಯುವುದು)

ಸುಟ್ಟ ಗಾಯ ಸುಟ್ಟಾಗಿಗಿಂತ ನಂತರಕೆ ತಾ ನೋಯುವುದು 
ಕಳೆದ ಪ್ರೀತಿ ಹೀಗೇ ತಾನೆ ನೆನಪ ತರಿಸುತ ನೋಯುವುದು 

ಮರೆತು ಬರಲು ಇನ್ನೆಲ್ಲೋ ಒಲವ ಹೊಸತು ದಾರಿಯ ಹಿಡಿದಿರಲು 
ಎಷ್ಟೇ ಎಚ್ಚರ ವಹಿಸಿ ನಡೆದರೂ ಮುಳ್ಳು ಚುಚ್ಚುತ ನೋಯುವುದು 

ಕೆಡವಿ ಬಿಟ್ಟ ಕಲ್ಲೊಳಗೆ ಈಗಲೂ ಏಕೋ ಈ ಪರಿ ಪರಿತಾಪ?
ಕೆತ್ತಿಕೊಂಡ ಉಳಿ ಸುತ್ತಿಗೆಯಿನ್ನೂ ಪಕ್ವವಾಗುತ ನೋಯುವುದು 

ಮೂಖವಾಗಿ ತಾನುಳಿದ ಗಾಳಿ ಸಿಕ್ಕ ಕೊರಳನು ಸೇರುತಲೇ 
ಬಿಕ್ಕಿ ಅಳುತ ಎದೆ ಭಾರಗೊಳಿಸೆ ಕಣ್ಣು ಹನಿಯುತ ನೋಯುವುದು 

ಜೀವವನ್ನೇ ಹಿಂದಿಕ್ಕಿ ಬಂದು ಗುರಿ ತಲುಪಿದಂತೆ ಗೆಲುವಾದಾಗ 
ಸೋತವುಗಳ ಬವಣೆ ಕಂಡು ಮನಸು ಮರುಗುತ ನೋಯುವುದು 

ನುಡಿಯುವಂತೆ ಹಾಲಕ್ಕಿಯೊಂದು ಮುಂಬಾಗಿಲಲ್ಲಿ ಗೂಡನು ಕಟ್ಟಿ 
ಸಂಭವಿಸಬಹುದಾದ ನಾಳೆಗಳ ಸುಳುವು ನೀಡುತ ನೋಯುವುದು 

ತಂಪು ನೆರಳು ತಂಗಾಳಿ ಸುಳಿದು ಧರೆ ಸ್ವರ್ಗವೇ ಎಂಬಂತಿರಲು 
ಹಿಡಿದ ಲೇಖನಿ ವಿರಹ ಗೀತೆಯ ಬಯಸಿ ಬರೆಯುತ ನೋಯುವುದು 

ಸೋತ ಪ್ರೇಮಿ ಹೀಗಿರಲು ಲೋಕ ತನ್ನನ್ನು ಹೇಗೆ ಬಣ್ಣಿಸಬಹುದು?
ಇತಿಹಾಸ ಪುಟಗಳ ಕೆದಕಲು ಬೆರಳು ಖಂಡಿತ ನೋಯುವುದು!!

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...