ಎಷ್ಟು ಸುಂದರ ಊಹೆಯ ಬದುಕು, ನಾನು ನಿನ್ನಲಿ ಬೆರೆತಿರಲು
ಎಂಥ ಸಂಜೆಯೂ ನವಿರೇಳುವುದು, ನಿನ್ನ ಗುಂಗಲಿ ಬೆರೆತಿರಲು
ಮುರಿದ ಬಾಗಿಲ ಗುಡಿಸಲಿನೊಳಗೂ, ಬೆಂದ ಅಂಬಲಿ ಏನು ರುಚಿ
ಬೆಚ್ಚಗೆ ಹೀರುತ ಒಲೆಯೆದುರಲ್ಲಿ, ಕಣ್ಣು ಕಣ್ಣಲಿ ಬೆರೆತಿರಲು
ಸಾತ್ವಿಕವಾಗಿ ಉಳಿದು ತನ್ನ ನೆಲೆಯನು ಕಂಡುಕೊಳ್ಳುವ ಬಣ್ಣ
ರೂಪಾಂತರಗೊಳ್ಳುವುದೇನೀ ಪರಿ ಬಣ್ಣದ ನೀರಲಿ ಬೆರೆತಿರಲು
ನನ್ನ ದಿನಚರಿ ಒಂದೇ ಆಗಿದೆ, ಮತ್ತೂ ಖಾಲಿಯಾಗುತ ಸಾಗಿದೆ
ಪದಗಳು ಪತ್ತೆ ಹಚ್ಚಿವೆ ನಿನ್ನ ಮನಸಿನ ಪುಟದಲಿ ಬೆರೆತಿರಲು
ರಾಶಿ ರಾಶಿ ಬಯಕೆಗಳ ಹೇಳಲಾಗದೆ ಉಸಿರು ಕಟ್ಟಿಹುದು
ನನ್ನ ಪಾಡು ಹಾಡಾಗುವುದೇ, ನಿನ್ನ ದ್ವನಿಯಲಿ ಬೆರೆತಿರಲು?
ಅರ್ಧಕೆ ನಿಂತ ಕವಿತೆಗಳು ಪರಿಪೂರ್ಣತೆಗೆ ಪಟ್ಟು ಹಿಡಿಯುತಿವೆ
ಅಲಂಕಾರಗೊಂಡಿಳಿದವು ನೀನು ಸಾಲು ಸಾಲಲಿ ಬೆರೆತಿರಲು
ಇಬ್ಬರದೂ ಒಂದೇ ದಾರಿ, ಒಂದೇ ಪಯಣ, ಒಂದೇ ಗುರಿ
ನಾನೇ ಹೊತ್ತು ಸಾಗುವೆ, ಸುಮ್ಮನೆ ನೀ ಎದೆಯಲಿ ಬೆರೆತಿರಲು
No comments:
Post a Comment