ನೆರಳನೀವ ಮರವೇ
ನಿನಗೆ ಬಿಸಿಲ ಭಯವೇಕೆ?
ಹಂಗಿನಲ್ಲಿ ಕ್ಷೇಮ ನಾನು
ಮಡಿಲ ನಂಬಿದುದಕೆ
ಉಸಿರಿನಲ್ಲಿ ನಿನ್ನ ಧ್ಯಾನ
ನೀನೇ ಇರದೆ ಇರದು ಪ್ರಾಣ
ಹಕ್ಕಿ ಗೂಡಿಗೆ ನೆಲೆಯು ನೀನು
ನೀನು, ದೇವರು ಒಂದೆಯೇನು?
ಹೇಳು ಮರವೇ ಏನು ಬೇಕು?
ಇಗೋ ಕೊಡಲಿ ಪೆಟ್ಟು ನಾಕು!
ಚಂದ್ರನಿರದೆ ಬಿಕೋ ಎನಲು
ಕತ್ತಲಷ್ಟೇ ಸುತ್ತುವರೆದು
ಬುಡದ ಮುನೇಶ್ವರನ ದೀಪ
ಹೊಟ್ಟೆ ತುಂಬ ಶುದ್ಧ ತುಪ್ಪ
ಯಾರು ಕೊಟ್ಟಾರೋ ಬೆಳಕ
ಕಡಿದುಬಿಡುತಾರೋ ಬಳಿಕ?
ಬೀಸಿ ಬಂತು ಬಿರುಗಾಳಿ
ಮೈಯ್ಯೊದರಿದಂತೆ ಭುವಿ
ಹತ್ತಾರು ಮರವು ಸತ್ತು
ವಿಷಯ
ನಿನ್ನ ಕಿವಿಗೂ ಬಿತ್ತು
ಅಳುಕದೆ ನೀ ಒಂದಿಷ್ಟೂ
ಈರ್ಷೆ ಇಗೋ ಮತ್ತಷ್ಟು
ಧೋ ಎಂದು ಬಂತು ಮಳೆ
ಕೊಚ್ಚಿ ಹರಿದು ಹೋಯ್ತು ಇಳೆ
ಸಾವು ನೋವಿಗಿಲ್ಲ ತಡೆ
ನಿನ್ನ ನಿಲುವು ಒಂದೇ ಕಡೆ
ಆಶ್ಚರ್ಯಕ್ಕಿಲ್ಲ ಕೊನೆ
ಇಗೋ ಉರುಳಿ ಬಿತ್ತು ಮನೆ!
No comments:
Post a Comment