Monday 22 June 2020

ಎಲ್ಲಿಯೂ ಹೋಗದೆ ಉಳಿದ ತಂಗಾಳಿಯೇ

ಎಲ್ಲಿಯೂ ಹೋಗದೆ ಉಳಿದ ತಂಗಾಳಿಯೇ
ಎಂದಿಗೆ ತಲುಪುವೆ ನನ್ನ ಸಂಗಾತಿಯ?
ಹೇಳಲು ಸೋತಿರೋ ಮಾತು ನೂರಾರಿವೆ 
ಮುಂಬರೋ ಸಾಲಿಗೆ ಮಾಡಿ ಕೊಡು ದಾರಿಯ
ಮೋಹಕ ಸಂಜೆಗೆ ಕಾಯುವ ಹಂಬಲ ನನ್ನದು
ತೀರದ ನೋವನು ವಿವರಿಸಿ ಹೇಳಲು ಆಗದು

ಮತ್ತದೇ ರಂಗಿನ ಉಡುಪು ತೊಟ್ಟಿರುವೆ
ಸಲೀಸಾಗಿ ನಿನಗೆ ಗುರುತು ಸಿಗಲೆಂದು
ಸುತ್ತಲೇ ಸುಳಿದೂ ಕುರುಡಾಗಿ ಬಿಡುವೆ 
ನನಗಿಂತ ಮಿಗಿಲಾದ ಮುರುಳರ ಕಂಡು

ಏನಾದರೇನೀಗ ಮತ್ತೊಮ್ಮೆ ಹೊರಳಿ 
ಬೀಸಿ ಹೋಗು ಬಿರಿದ ಎದೆ ಬೀದಿಯಲ್ಲಿ
ಒಲುಮೆಯ ಎಚ್ಚರಿಸು ತೂಕಡಿಸುವಂತಿರೆ
ಪ್ರೀತಿಯಲಿ ಸೋತವರೇ ಸಾಮಾನ್ಯರಿಲ್ಲಿ
ಮೌನ ರಾತ್ರಿಯ ಕೆಣಕುವ ಹಾಡಿಗೋ ನನ್ನದು 
ಪ್ರಶ್ನೆಯೇ ಇಲ್ಲದೆ ಉತ್ತರ ಹುಡುಕಲು ಆಗದು!

ಮತ್ತಿಗೆ ಕಾರಣ ಹುಡುಕಿ ಹೀರುತಲಿರುವೆ
ಅವಳ ಕಣ್ಣ ನೆನೆದು ಮಂಕಾಯ್ತು ಮದ್ಯ
ತುಟಿ ಮೇಲೆ ನಗುವನ್ನು ನಂಬುವ ಲೋಕ
ಅರಿವುದೇ ಒಳಗೊಳಗೆ ಚೂರಾದ ಸತ್ಯ

ಕಾತರ ಬೆರಳಂಚಿನಲಿ ಸೋತ ಕತೆಗೆ
ಬೇಸರಕೆ ಹರಿದ ಗೂಡಾದಂತಿದೆ ಮನ
ಗೊತ್ತಿರುವ ದಾರಿಯಲಿ ನೂರಾರು ತಿರುವು
ಹೊಸ ದಿಕ್ಕಿನಲ್ಲೀಗ ಪ್ರೇಮ ಪಯಣ
ತೇಲಿ ಹೊರಟ ಮೋಡದ ಪಾಡು ನನ್ನದು
ಕರಗಬೇಕಿರುವಲ್ಲಿ ಪೂರ್ತಿ ಕರಗಲು ಆಗದು

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...