Wednesday, 17 June 2020

ಹೇಳು ಗೆಳತಿ ಏನು ಬೇಕು

ಹೇಳು ಗೆಳತಿ ಏನು ಬೇಕು 
ಜನ್ಮ ದಿನಕೆ ಉಡುಗೊರೆ?
ಈಗಿಂದೀಗಲೇ ಕೂಡಿ ಇಡುವೆ 
ಕೊಂಡು ತರಲು ಆದರೆ 
ಕುಹಕ ನಗೆಯ ಬೀರಬೇಡ 
ಮನಸು ಒಪ್ಪದೆ ಹೋದರೆ 
ಬಳಿಕ ನನ್ನ ದೂರಬೇಡ 
ನೀಡಲಿಲ್ಲವಾದರೆ 

ತಡೆದು ನಿಲ್ಲಿಸು ಜಗಳವಾಡುತ  
ನಿನಗೆ ಎಲ್ಲ ಹಕ್ಕಿದೆ 
ಬಹಳವಾಗಿ ಅರಸಿ ಬಂದು 
ನೀನು ನನಗೆ ಸಿಕ್ಕಿದೆ 
ನಗುವಿನಲ್ಲಿ ಚಂದ ನೀನು 
ನಿನ್ನ ದುಃಖ ನನ್ನದು 
ಎಷ್ಟು ಪ್ರೀತಿಸುವೆನೆಂದರೆ 
ಮಾತಲ್ಲಿ ಹೇಳಲು ತೀರದು 

ನನ್ನ ಬಡತನ ಹೊಸತು ನಿನಗೆ 
ರೂಢಿ ಮಾಡಿಕೋ ಮೆಲ್ಲಗೆ
ದ್ವಂದ್ವ ಬದುಕು ತುಂಬ ದೂರ 
ಸಾಗಲಾರದು ಎನಿಸಿದೆ 
ನನ್ನ ಸಿರಿ ನೀ, ನಿನ್ನ ಸಿರಿ ನಾ 
ಯಾವ ಸಿರಿ ಸರಿ ಸಾಟಿಯು 
ಸೇರಿ ತಟ್ಟಲು ಹದ ಸಿಗುವುದು 
ರುಚಿ ಹೆಚ್ಚುತ ರೊಟ್ಟಿಯು 

ಇಗೋ ಹಿಡಿ ಬರಿಗೈಯ್ಯಿ ನನದು 
ಒಂಟಿಯಾಗಲು ಎಂದೂ ಬಿಡದು 
ಖಾಲಿ ಕಿಸೆಯಲಿ ಕನಸು ಆರು 
ನಿನ್ನ ಕೂಡಿ ಮತ್ತೂ ನೂರು
ಮರೆತ ಮಾತ ಮರಳಿ ನೀಡು 
ಕ್ಷಮೆಯ ಖಾತೆ ಭರ್ತಿ ಮಾಡು 
ಪ್ರತಿ ಸಂಜೆ ನಿನ್ನ ಓದುವೆ 
ಕವಿತೆಯಾಗಿ ನನ್ನ ಕಾಡು 

ಇಷ್ಟೇ ಗೆಳತಿ ನನ್ನ ಜಾತಕ 
ಮುಂದಿನಿಂದ ಹಿಂದಕೆ 
ಹಿಂದಿನಿಂದ ಮುಂದಕೆ 
ಒಂದೇ ಎಣಿಕೆ, ಒಂದೇ ಲೆಕ್ಕ 
ಇನ್ನು ಮೇಲೆ ಏರು ಮುಖವ 
ಕಾಣಬಹುದು ಬಾಳ ರೇಖೆ 
ಕುಂದು ಕೊರತೆಯ ನೀಗಿಸಿ 
ನೀನಿರುವೆಯಾದರೆ ನನ್ನ ಪಕ್ಕ 

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...