ಮೋಸ ಮಾಡುವವಗೆ
ಮೋಸ ಹೋಗುವ ಚಿಂತೆ, ಹೆಚ್ಚು ಕಾಡುವುದು
ಕಾಸು ಮಾಡಿದವಗೆ
ಕಾಸು ಕರಗುವ ಚಿಂತೆ, ಹೆಚ್ಚು ಕಾಡುವುದು
ಇಂದು ಮುಗಿದು ನಾಳೆಯ ಚಿಂತೆ
ಬದುಕಿನಾಚೆಗಿನ ಸಾವಿನ ಚಿಂತೆ
ಚಿಂತೆವುಳ್ಳ ದಾರಿಯಲ್ಲಿ ಚಿಂತಿಸದವರ ಚಿಂತೆ
ಚಿಂತೆಯಿರದ ಸಂತೆಯಲ್ಲಿ ನಿದ್ದೆ ಬಾರದ ಚಿಂತೆ
ಕೋಪ ಬೀರಿದಲ್ಲಿ ದೀಪ ಆರಲಿಲ್ಲ
ಶಾಪ ಕೊಟ್ಟರೂನು ಮಬ್ಬು ಮೂಡಲಿಲ್ಲ
ಹರಿವ ನೀರಿನಲ್ಲಿ ದೋಣಿ ಮುಳುಗಲಿಲ್ಲ
ಅಂಬಿಗ ಕುರುಡಾಗಿ ಸುಳಿಗೆ ಸಿಲುಕಲಿಲ್ಲ
ಬಯಸಿದವು ಯಾವೂ ಆಗಲಿಲ್ಲವೆಂಬುದೇ ಚಿಂತೆ
ಚಿಂತೆಯಿರದ ಸಂತೆಯಲ್ಲಿ ನಿದ್ದೆ ಬಾರದ ಚಿಂತೆ
ಬಿತ್ತಿಕೊಂಡ ಮೋಡ ಇಲ್ಲಿ ಕರಗಲಿಲ್ಲ
ಹಾಕಿಕೊಂಡ ಸೀಮೆ ದಾಟಿ ಹಬ್ಬುತಿಲ್ಲ
ನೆಚ್ಚಿದ ಬಣ್ಣವ ಹೂವು ತಾಳುತಿಲ್ಲ
ಕದ್ದು ತಂದ ಹಣ್ಣು ರುಚಿಯ ಮರೆಸುತಿಲ್ಲ
ತನ್ನಿಷ್ಟಕೆ ಏನೂ ಕುಣಿಯುತಿಲ್ಲವೆನ್ನುವ ಚಿಂತೆ
ಚಿಂತೆಯಿರದ ಸಂತೆಯಲ್ಲಿ ನಿದ್ದೆ ಬಾರದ ಚಿಂತೆ
ಪ್ರೀತಿಗೆ ಪ್ರತಿಯಾಗಿ ದ್ವೇಷ ಕಾರುತಾರೆ
ಅಪ್ಪುವ ಬದಲಾಗಿ ಉಸಿರ ಕಟ್ಟುತಾರೆ
ಎಲ್ಲಕೂ ಮಿಗಿಲಾಗಿ ತಾವೇ ಇರಬಯಸಿ
ಎಳೆತ, ತುಳಿತಕ್ಕೆ ಸಂಚು ಹೂಡುತಾರೆ
ತನ್ನವ ಯಾರೆಂದು ಅರಿತುಕೊಳ್ಳಲಾಗದ ಚಿಂತೆ
ಚಿಂತೆಯಿರದ ಸಂತೆಯಲ್ಲಿ ನಿದ್ದೆ ಬಾರದ ಚಿಂತೆ
ಗೋಡೆ ಗೋಡೆಗೆ ವಿವಿಧ ಲಕ್ಷಣ
ಉಪ್ಪರಿಗೆ ಬಳಲಿ ಬಿರಿಯೇ ತಕ್ಷಣ
ಬಾಗಿಲ ಬಿಗಿಯಾಗಿಸಲು ಏನಂತೆ
ಉರುಳುಗಂಬಕ್ಕೆ ಕೊಡುವುದೇ ಸಾಂತ್ವನ
ಇರುವುದನ್ನು ಉಳಿಸಿಕೊಳುವ ಹವಣಿಕೆಯ ಚಿಂತೆ
ಚಿಂತೆಯಿರದ ಸಂತೆಯಲ್ಲಿ ನಿದ್ದೆ ಬಾರದ ಚಿಂತೆ...
No comments:
Post a Comment