ಮಳೆಯ ಹಿಂದೆ ಬಿಸಿಲು ಬಂದು
ಮೂಡಿತಿಲ್ಲಿ ಕಾಮನ ಬಿಲ್ಲು
ಹಿಡಿದು ತಂದೆ ಚಿಟ್ಟೆಯೊಂದ
ಕೊಡುವೆ ನಿನಗೆ ಓಡದೆ ನಿಲ್ಲು
ಗೀಚಿಕೊಳ್ಳುವೆ ಸಾಲನು
ಮನದ ಖಾಲಿ ಪುಟದಲಿ
ಉಳಿಸಿಕೊಳ್ಳುವೆ ಆಸೆಯ
ಹೇಳಲಾಗದೆ ಎದುರಲಿ
ಈಗಾಗಲೇ ತುಂಬ ತಡವಾಗಿದೆ
ಹೇಳೋದು ಇನ್ನೂ ಬಾಕಿ ಇದೆ..
ಕಿಟಕಿ ಗಾಜಿಗೆ ಚಿಟ-ಪಟ
ಮಾತು ಕಲಿಸಿತು ಮಳೆ ಹನಿ
ದೋಣಿ ಮಾಡಿ ಪುಟಗಳ
ತೇಲಿ ಬಿಡುವೆ ತಾಳು ನೀ
ಜರುಗಿ ಹೋಗಲಿ ಈಗಲೇ
ಒಂದು ಸಣ್ಣ ಕದನವು
ಸೋತು ಇಬ್ಬರೂ ಕೂರುವ
ಸರಿದು ಹೋಗಲಿ ಕಾಲವು
ಮೊಗ್ಗೆಲ್ಲವೂ ಈಗ ಅರಳೋಕಿದೆ
ಹೇಳೋದು ಇನ್ನೂ ಬಾಕಿ ಇದೆ..
ಬಿಡಿಸ ಬೇಕಿದೆ ಒಗಟನು
ಸಿಗುವೆಯಾದರೆ ಕನಸಲಿ
ಕರೆದು ಹೋಗುವೆ ನಗುವನು
ಇರಿಸಿ ನಿನ್ನ ತುಟಿಯಲಿ
ಬೀಸೋ ಗಾಳಿಯ ಸೊಗಸನು
ಉಸಿರಿನಾಳಕೆ ಇಳಿಸುವ
ಉದುರಿದೆಲೆಗಳ ಎಣಿಸುತ
ಮರದ ನೆರಳಿಗೆ ತಿಳಿಸುವ
ಈ ದಾರಿಯೂ ಕೂಡ ಮುಗಿವಂತಿದೆ
ಹೇಳೋದು ಇನ್ನೂ ಬಾಕಿ ಇದೆ..
ಕಣ್ಣಿಗೊರಗಿದ ಕಾಡಿಗೆ
ಇರಲಿ ಅದರ ಪಾಡಿಗೆ
ಏನೋ ಹೇಳಿದೆ ಆಲಿಸು
ಮಾತು ಕಲಿತ ಗುಂಡಿಗೆ
ನೀಳವಾಯಿತು ನೀರಸ
ಚೂರು ರಂಜಿಸು ಮೇಘವೇ
ದೂರ ದೂರ ಉಳಿದರೆ
ಪ್ರೀತಿಯಾಗಲು ಸಾಧ್ಯವೇ
ನೀನೆಂದರೆ ಮೌನ ಮಿತಿ ಮೀರಿದೆ
No comments:
Post a Comment