Monday, 1 November 2021

ಹಗಲಿರುಳೆನದೆ, ಅನುದಿನ ಬಿಡದೆ

ಹಗಲಿರುಳೆನದೆ, ಅನುದಿನ ಬಿಡದೆ 

ಬೆರಗುಗಳ ಮಳೆ ಸುರಿಸಿದೆ ಪ್ರಣಯ 
ಅನುಭವವಿರದೆ, ಚಲಿಸುವ ನಡಿಗೆ 
ಎಡವಿದ ಗಳಿಗೆ ಹಿಡಿವುದು ಪ್ರಣಯ 

ಮರೆತರೂ ನೆನಪು ತರಿಸುವ ವಿಷಯ 
ವಿಷಯಾಂತರ ಮಾಡದು ಭರವಸೆಯ 
ಸವಿ ಸಮಯವನು ಸವೆಸುವ ಹೃದಯ 
ಹಾಡೊಂದಿಗೆ ಕಾದಿದೆ ಆಲಿಸೆಯಾ?

ಹೊಸ ತುಡಿತಗಳು ಜೊತೆಗೊಡುತಿರಲು
ಬರೆಯುವ ಸರದಿ, ಸುಂದರ ಕವನ
ನುಡಿದರೆ ಹರಳು ಕಳೆಯುವ ಭಯಕೆ 
ಕೊನೆಯಿರಿಸುತಿದೆ ಮೌನದ ಮಿಲನ

ಅರೆ ಮುಚ್ಚಿದರೆ, ಅರೆ ತೆರೆದಂತೆ 
ಹೆಚ್ಚೇನನೂ ಹೇಳಲು ಆಗದಿರೆ 
ಸ್ವಪ್ನಗಳೆಲ್ಲ ಕಂಬನಿ ಹಿಡಿದು 
ಹೊರಹೊಮ್ಮಿವೆ ಕಣ್ಣು ನಾಚುತಿರೆ  

ನಿಜ ಹೇಳಲು ಬರದೆ ಅನುರಾಗಿ 
ಒಗಟಿನ ಧಾಟಿಯ ಮೊರೆ ಹೋದಂತೆ  
ಇರುವಲ್ಲಿಯೇ ಮರೆತ ತನ್ನನ್ನು 
ಬೊಗಸೆಯ ಹಿಡಿ ನೀರಲಿ ಪಡೆದಂತೆ 

ಎರಡು ತೊರೆಯು ಜೊತೆಗೂಡಿರಲು 
ಮೊರೆವ ಅಲೆಗೆ ನೆರವಾಗಿರಲು 
ಕರೆ ನೀಡದೆಯೇ ಬರುವುದು ಪ್ರಣಯ 
ಕಡಲ ಒಡಲಲಿ ಮಗುವಾಗಿರಲು... 

No comments:

Post a Comment

ದೂರದಲ್ಲಿ ಯಾರೋ ನನ್ನ ಕೂಗಿದಂತಿದೆ

ದೂರದಲ್ಲಿ ಯಾರೋ ನನ್ನ ಕೂಗಿದಂತಿದೆ  ಹತ್ತಿರದಲ್ಲಿ ಬಂದು ಕೂತುಕೊಂಡ ಹಾಗಿದೆ  ಯಾವ ಮಾತಿಲ್ಲದೆ, ಮೌನವೇ ಸಾಗಿದೆ  ಹೋಗಿ ಬಂದು ನಿಲ್ಲಲಿಲ್ಲ  ಎಚ್ಚರಿಸಿ ಕೇಳಲಿಲ್ಲ ನನ್ನಂತ...