Monday, 1 November 2021

ಯಾರಿಗಾಗಿ ಯಾರು ಎಂದು

ಯಾರಿಗಾಗಿ ಯಾರು ಎಂದು

ಎಂದೋ ನಿಶ್ಚಯಿಸಿದಂತೆ 
ಎದುರಾಗೋ ವೇಳೆ ಪ್ರೀತಿ 
ವಿನಿಮಯವಾಗುವಂತೆ 
ಜೋಡಿಗೂಡಿದಂತೆ ನಾವು 
ಸಾಗಿ ಬಂದ ದಾರಿಯಲ್ಲಿ
ಮತ್ತೆ ಪ್ರೀತಿ ಮೂಡಿಸುವ
ಹೊಚ್ಚ ಹೊಸ ರೀತಿಯಲ್ಲಿ 

ಹತ್ತಿರಕ್ಕೆ ಯಾರೋ ಬಂದು
ಚಂದ ಉತ್ತರಿಸುವಂತೆ 
ಪ್ರಶ್ನೆ ಇಡೋ ಹೃದಯವೇ 
ಮೂಕವಾಗಿ ಹೋಗುವಂತೆ
ನಾನು ಯಾರೋ, ನೀನು ಯಾರೋ
ಯಾವ ಜನ್ಮ ನಂಟು ಇದು
ಸೇರಿಸಿದೆ ನಮ್ಮ ಹೀಗೆ
ಮತ್ತೆ ಪ್ರೀತಿ ಮೂಡೋ ಹಾಗೆ

ಮರೆಯದೆ ಬರುವೆ ಖಂಡಿತ
ಉಡುಗೊರೆಯೊಡನೆ ಕಾದಿರು 
ಜಗದಲಿ ಒಲವೇ ಶಾಶ್ವತ 
ಜಗವೇ ಅಳಿದು ಹೋದರೂ 
ಖುಷಿಯ ಚಿಲುಮೆ 
ಒಲಿದ ಒಲುಮೆ 
ರಾಗದಂತೆ ಕೂಡೋವಾಗ  
ಹುಟ್ಟುವುದು ಅನುರಾಗ  

ಯಾರಿಗಾಗಿ ಯಾರು ಎಂದು
ಎಂದೋ ನಿಶ್ಚಯಿಸಿದಂತೆ 
ಎದುರಾಗೋ ವೇಳೆ ಪ್ರೀತಿ 
ವಿನಿಮಯವಾಗುವಂತೆ 

ಹಲವು ಬಾರಿ ಮೂಕನಾಗಿ ಹೋಗೋ ಸಂಭವ 
ದೂರವಾಗಿ ಸನಿಹವಿರುವ ಹುಚ್ಚು ಅನುಭವ 
ರಾರಾಜಿಸೋ ಬಯಕೆಯ, ಈಡೇರಿಸು ಮನಸಲಿ 
ಆರಂಭವೇ ಸುಂದರ, ಅಂತೆಯೇ ಮಧ್ಯಂತರ 
ನೇರಾ ನೇರಾ ಮಾತಿರಲಿ
ಮುಖತಃ ನಗುವಲಿ 
ಸುಖದ ಅಲೆಯ ತರೋ 
ಕಡಲ ಆ ತೀರದಲಿ 
ಸರಿವ ಸಮಯಕಿದೋ
ನೆನೆವ ನೆಪವ ಕೊಡು
ಬಿಡಿಸಿಡುವೆನು ಇಗೋ 
ಪುಟಗಳ ಮಡಿಲಲಿ 

ಮರೆಯದೆ ಬರುವೆ ಖಂಡಿತ
ಉಡುಗೊರೆಯೊಡನೆ ಕಾದಿರು 
ಜಗದಲಿ ಒಲವೇ ಶಾಶ್ವತ 
ಜಗವೇ ಅಳಿದು ಹೋದರೂ 
ಖುಷಿಯ ಚಿಲುಮೆ 
ಒಲಿದ ಒಲುಮೆ 
ರಾಗದಂತೆ ಕೂಡೋವಾಗ  
ಹುಟ್ಟುವುದು ಅನುರಾಗ  

ಯಾರಿಗಾಗಿ ಯಾರು ಎಂದು
ಎಂದೋ ನಿಶ್ಚಯಿಸಿದಂತೆ 
ಎದುರಾಗೋ ವೇಳೆ ಪ್ರೀತಿ 
ವಿನಿಮಯವಾಗುವಂತೆ 

No comments:

Post a Comment

ಹೃದಯವ ನೀಡಲೇ

ಹೃದಯವ ನೀಡಲೇ ಹೇಳದ ಮಾತಿವೆ ನೂರಾರು ಆಲಿಸು ಈಗಲೇ ಪಾಲಿಸಿ ನಿನ್ನಯ ನೆರಳನು ಹೃದಯವ ನೀಡಲೇ ಹೊಂಗನಸ ಅಂಗಳದಿ ಅರಳಿರುವ ಚಂದಿರ ನೀ  ಯಾರಿರದ ತೀರದಲಿ ಅಲೆಗಳಲೂ ನಿನ್ನ ದನಿ  ...