ಅಲೆ ಬೇಕೆಂದಿದ್ದರೆ ಮುಳುಗಿಸಬಹುದಿತ್ತು
ಆದರದು ದಡ ತಡವಿ ಹಿಂದಿರುಗುತಿದೆ
ನಾವು ಸುಮ್ಮನೆ ಸೆಳೆತಕ್ಕೊಳಗಾಗಬಹುದಿತ್ತು
ಬದಲಿಗೆ ಪಾದವೂರಿ ಖುಷಿ ಪಟ್ಟೆವು
ಮೋಡ ಕಟ್ಟಿದಷ್ಟೇ ಧಾವಂತದಲ್ಲಿ ಇಳಿದು
ನೆಲಕೆ ಹದವಾಗಿ ಹಂಚಿಕೊಂಡಿತು ತನ್ನ
ಬೇಡೆಂದರೂ ಕೈ ಹಿಡಿದು ಕರೆದೊಯ್ಯುತ
ಮರು ಜೋಡಣೆಯಾಗಿದೆ ಬಿರುಕು ಬಿಟ್ಟ ಮನ
ತಪ್ಪಲಲ್ಲಿ ಹಾಳೆಯ ದೋಣಿ ಬಿಟ್ಟೆವು
ಆದ ತಪ್ಪುಗಳ ನೆನೆದು ಕಣ್ಣೀರಿಟ್ಟೆವು
ಬೆಟ್ಟ ಕರಗಿ ಎರಗಬಹುದಿತ್ತು ದುಃಖಕ್ಕೆ
ಅಲ್ಲ, ಈಗ ಸಂಯಮ ಮೆರೆಯುವ ಸಮಯ
ಹೇಗೇ ಅಪ್ಪಿದರೂ ಎದೆ ಸದ್ದು ತಟ್ಟುವುದು
ಹಾಗೊಮ್ಮೆ ತಟ್ಟದೇ ಹೋದರೆ ಆತ್ಮಾವಲೋಕನ
ಸಂಚರಿಸುವ ಕಣಗಳಿಂದ ಶಬ್ಧ ಉತ್ಪತ್ತಿ
ಸ್ತಬ್ಧ ಪ್ರೇಮದ ಸಾಕ್ಷಿ ಮೌನ ವ್ಯಸನ
ನಾವು ಬಲ್ಲವರಾದ್ದರಿಂದ ಒಬ್ಬರನ್ನೊಬ್ಬರು
ಬಲಹೀನರಾಗಿದ್ದೇವೆ ಒಬ್ಬರಲ್ಲಿ ಮತ್ತೊಬ್ಬರು
ನಾನೇನೆಂಬ, ನೀನೇನೆಂಬ ಗೊಂದಲವೇ
ನಮ್ಮ ಎಚ್ಚರಿಕೆಯ ದೀಪಕ್ಕೆ ತೈಲ ರೂಪ
ನಿವಾರಿಸಿಕೊಂಡ ಕಷ್ಟಗಳು ಒಣ ಪತ್ರೆ
ಹೊಸ ಚಿಗುರಿನೆಡೆ ಗಮನ ಹರಿಸುವ
ಬೆಳಕು ಮೂಡುವುದು ಇನ್ನೂ ನಿಧಾನ
ಕತ್ತಲಿನ ಕೌತುಕದ ಬುತ್ತಿಯ ತೆರೆಯುವ
No comments:
Post a Comment