Sunday, 4 October 2020

ತಪ್ಪು ತಿಳಿಯಬೇಡಿ ನನ್ನ ಹೀಗೆಂದೆ ಎಂದು

ತಪ್ಪು ತಿಳಿಯಬೇಡಿ ನನ್ನ ಹೀಗೆಂದೆ ಎಂದು  

ಅಡುಗೆ ವೇಳೆ ಮಡದಿ ಮನವ ಕಡದ ಬೇಡಿ ಎಂದೂ 
ಉಪ್ಪು ಚೂರು ಹೆಚ್ಚು ಸುರಿಯಬಹುದು ಕೋಪ ಬಂದು 
ಸಬೂಬು ನೀಡಬಹುದು ಅದು ಕಣ್ಣೀರು ಎಂದು 

ಬಿಟ್ಟು ಕೊಡಿ ವಾದ ಸಂವಾದ ಏನೇ ಇರಲಿ 
ಕೊಡಿಸಿ ಬಿಡಿ ಕೇಳಿದೆಲ್ಲವನ್ನೂ ಏನೇ ಬರಲಿ 
ಇಲ್ಲವೆನ್ನುವ ಮುನ್ನ ಆಚೆ ಈಚೆ ಗಮನಿಸಿ 
ಯಾವುದೇ ಆಯುಧ ಕೈಗೆ ಸಿಗದೇ ಇರಲಿ 
 
ತಪ್ಪು ತಿಳಿಯಬೇಡಿ ನನ್ನ ಹೀಗೆಂದೆ ಎಂದು  
ಅಡುಗೆ ವೇಳೆ ಮಡದಿ ಮನವ ಕಡದ ಬೇಡಿ ಎಂದೂ 

ನೆನಪಿಡಿ ನಮ್ಮ ನಿರ್ಧಾರ ನಮ್ಮದಲ್ಲ 
ಹಾಗೆಂದು ಎಲ್ಲವೂ ಇವರ ಕೈಯ್ಯಲಿಲ್ಲ 
ಸುಳ್ಳಿನಲ್ಲಿ ಪಳಗಬೇಕು ಸತ್ಯವೆಲ್ಲ ವ್ಯರ್ಥ 
ಮೌನ ವಹಿಸಿದಾಗ ಅದಕೆ ಸಾವಿರಾರು ಅರ್ಥ 

ತಪ್ಪು ತಿಳಿಯಬೇಡಿ ನನ್ನ ಹೀಗೆಂದೆ ಎಂದು  
ಅಡುಗೆ ವೇಳೆ ಮಡದಿ ಮನವ ಕಡದ ಬೇಡಿ ಎಂದೂ 

ನಕ್ಕು ಮಾತನಾಡಿ ವಿಷಯ ಆಳ ಹೊಕ್ಕುವಂತೆ 
ಜಾರಿಕೊಳ್ಳಿ ಬೆಣ್ಣೆಯಿಂದ ಕೂದಲೆಳೆಯುವಂತೆ 
ಸಿಟ್ಟು ಮಾಡಿಕೊಳ್ಳೋ ಮುನ್ನ ಕತೆಯನೊಂದ ಕಟ್ಟಿ 
ಎಚ್ಚರ ನಿಮ್ಮ ಸೊಲ್ಲು ತಿರುಗು ಬಾಣದಂತೆ 

ತಪ್ಪು ತಿಳಿಯಬೇಡಿ ನನ್ನ ಹೀಗೆಂದೆ ಎಂದು  
ಅಡುಗೆ ವೇಳೆ ಮಡದಿ ಮನವ ಕಡದ ಬೇಡಿ ಎಂದೂ 

ಮಾತು ಕೊಡುವ ಮುನ್ನ ಒಮ್ಮೆ ಮುರಿದ ಮಾತ ಕೇಳಿ 
ಹತ್ತು ಹಲವು ಆಯ್ಕೆಯಿದ್ದೂ ಆಯ್ದುಕೊಂಡು ಬೇಲಿ 
ದಾಟಿ ಬರಲು ಸಂಚು ಹೆಣೆದು ಬಿದ್ದ ಹೆಣಗಳೆಷ್ಟೋ 
ನಮ್ಮ ನಿಮ್ಮ ಲೆಕ್ಕ ಅವರ ಸಾಲು ಸೇರದಿರಲಿ 

ತಪ್ಪು ತಿಳಿಯಬೇಡಿ ನನ್ನ ಹೀಗೆಂದೆ ಎಂದು  
ಅಡುಗೆ ವೇಳೆ ಮಡದಿ ಮನವ ಕಡದ ಬೇಡಿ ಎಂದೂ 

ಅವರು ಕೆಟ್ಟವರು ಎಂದು ಅನಿಸದಿರಲಿ ಅಷ್ಟೇ 
ನಾವು ಒಳ್ಳೆಯವರ ಹಾಗೆ ನಟಿಸಬಾರದಷ್ಟೇ 
ಎಷ್ಟೇ ಕಹಿಯ ಉಂಡರೂ ಕೊನೆಗೆ ಎಲ್ಲ ಸಿಹಿಯೇ 
ನೆನಪುಗಳ ನೆನೆದು ನಗಲು ಮರೆಯಬಾರದಷ್ಟೇ 

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...