ಅರೆ ಚಂದಿರ ಮೊಗವ
ಮುಗಿಲ ಹೆಗಲಿಗಿರಿಸಿ
ಸುಮ್ಮನೆ ಕಣ್ಮುಚ್ಚಿಹನು,
ಗಮನಿಸಿದ ಪ್ರೇಮಿ
ವಿರಹಿಯ ಸೋಗಿನಲ್ಲಿ
ಶೋಕ ಗೀತೆ ಬರೆದಿಹನು
"ಏನು ಆ ಕಲೆ?"
"ಪಸೆ" ಎಂದ ಚಂದ್ರ
ತನ್ನ ಕೆನ್ನೆ ಸವರಿಕೊಂಡ
ಪ್ರೇಮಿ ನೆನೆದು ಸಖಿಯ
ಮುಂದುವರಿದ ಮಾತು-ಕತೆ
ಸತ್ವಹೀನವೆಂಬಂತೆ
ಕುಸಿ ಕುಸಿಯಿತು ಕವಿತೆ..
"ಖಾಲಿ ಬಿಟ್ಟ ಸ್ಥಳವ
ತುಂಬಿಕೊಳ್ಳಲೇನು?"
ಅಪ್ಪಣೆಗೆ ಕಾದಿತ್ತು
ಕಣ್ಣಂಚಲಿ ಕಂಬನಿ
ರೆಪ್ಪೆ ಒಪ್ಪಿಗೆ ಕೊಡುತಲೇ
ಜಾರಿ ಹಾಳೆಯ ತಬ್ಬಿ
ಮೈ ಚೆಲ್ಲಿಕೊಂಡಿತು
ಬಹುಶಃ ಚಂದ್ರನೂ
ಏನನ್ನೋ ಗೀಚುತಿದ್ದ
ಮಸಿ ಮೋಡಗಳು
ದುಂಡಗೆ ಅಕ್ಷರದಂತೆ
ಅಲ್ಲಲ್ಲಿ ಬಿಡಿಯಾಗಿ
ಮುಂದೆಲ್ಲೋ ಬಿಗಿಯಾಗಿ
ಲಿಪಿಯನ್ನು ಹೋಲುತಿತ್ತು
ಆಗಸಕ್ಕೆ ಕಣ್ಣು ನೆಟ್ಟು
ಕೆನ್ನೆಗೆ ಆನಿಸಿ ಬೆಟ್ಟು
ಏನೋ ಹೊಳೆದಂತೆ
ಬರೆದು ಒಡೆದಂತೆ
ಮತ್ತೆ ಬೆಳದಿಂಗಳನ್ನು
ಸೀಳಿ ಹೊರಟ ನೋಟ
ತಿಳಿ ಮೋಡ ಪರದೆ ಹಿಂದೆ
ಮಸಲತ್ತಿನ ಆಟ
ಕಾಗದದ ಉಂಡೆ ರಾಶಿ
ತನ್ನ ಸುತ್ತ, ಪ್ರೇಮಿ ತಾನು
ಏನು ಬರೆಯಲೆತ್ನಿಸಿದರೂ
ಕೈಲಾಗದೆ ಸೋತ
ಎಷ್ಟೋ ಕವಿತೆಯ ಕಟ್ಟಿ
ಎಷ್ಟೋ ಕವಿಗಳ ಮುಟ್ಟಿ
ವಿರಹಿಯ ತಲುಪದ ಚಂದ್ರ
ಮುಖ ಊದಿಸಿ ಕೂತ
ನಡು ರಾತ್ರೆ ನಿದ್ದೆಯಲ್ಲಿ
ಲೋಕ ಮೈ ಮರೆತಿರಲು
ಇಳಿದು ಬಂದ ಭುವಿಗೆ
ಉಂಡೆಗಳ ಹರಡುತ
ಅಲ್ಲೊಂದು ಇಲ್ಲೊಂದು
ಸಾಲಗಳ ಹೆಕ್ಕಿ
ವಿರಹಿಯ ಮನಸಿಗಿಟ್ಟು
ಕರಗಿದ ಬಿಟ್ಟ ಚಂದ್ರ
ಎಚ್ಚರಗೊಂಡವ ತನ್ನ
ತನ್ನಲ್ಲೇ ಒಗ್ಗೂಡಿಸಿ
ಏನೋ ಹೊಳೆದವನಂತೆ
ಚಡಪಡಿಸುತಲಿದ್ದ ಕವಿ
ಅರೆ ಬೆಂದ ಸಾಲುಗಳ
ಪೂರ್ಣಗೊಳಿಸಿ ಹಾಡಿದ
ತೂಕಡಿಸುತ್ತಿದ್ದ ಚಂದ್ರ
ಸುಖ ನಿದ್ದೆಗೆ ಜಾರಿದ....
No comments:
Post a Comment