ಮುಂಬಾಗಿಲಿಗೆ ಕಣ್ಣಿರಿಸಿ
ನಾ ಕಾದೆ ನಿನ್ನ ಬರುವಿಕೆಗೆ
ಬಾರದೆ ನೀ ಮನ ಭಾರದಲಿ
ಉಳಿಯುವುದಾದರೂ ಹೇಗೆ?
ತಂಗಾಳಿಯನು ತಡೆದಿರಿಸಿ
ತುಸು ತಡವಾಗಿಸುವ ಕೋರಿಕೆಗೆ
ಒಲ್ಲದೆ ತಾನು ಬೀಸಿ ಸಾಗಿತು
ಒಲವೆಂಬುದೂ ಹೀಗೇ
ಬಾನೆತ್ತರ ಕನಸನು ದಾಟಿ
ಬಾ ಹತ್ತಿರ ಬದುಕಿಸಲೆಂದು
ನೀ ನೀಡುವುದಾದರೆ ಅದೇ ಉತ್ತರ
ಪ್ರಶ್ನಿಸದಿರು ಹಾಗೆ!
ಹೊಂಗನಸಿನ ಮುಂಜಾವಿನಲಿ
ನವ ತೇಜಸ್ಸನ್ನು ಸುರಿಸುವ ನಿನ್ನ
ಹೇಗಾದರೂ ವಶವಾಗಿಸಿಕೊಳ್ಳುವ
ಹಂಬಲ ಇಬ್ಬನಿಗೆ
ವಿಂಗಡಿಸುತ ಉತ್ಸಾಹದಲಿ
ಉಗುರೆಲ್ಲಕೂ ಬಳಿದ ಬಣ್ಣದಲಿ
ಮರೆಸಿಡುತ ನಿನ್ನ ಹೆಸರ ಸಿಗೋ
ಖುಷಿ ನನ್ನೊಬಳಿಗೇ
ಸಾರಂಗಿಯ ಸೋಕುತ ಬಿಲ್ಲು
ಬೆರಳಾಡಿಸಿ ನುಡಿಸುತ ನಿಲ್ಲು
ಈ ಬಿಗಿಮೌನವ ಮುರಿಯುವ ಸಾಹಸಿ
ನೀನೊಬ್ಬನೇ ತಾನೆ!
ನೂಪುರದೊಳ ಇಂಚರದಲ್ಲಿ
ಪುಟಿದು ಸಂಚರಿಸುವೆ ನನ್ನೊಳಗೆ
ನೀ ಹಬ್ಬುವೆ ಅಬ್ಬರವಿಲ್ಲದೆ
ಹಬ್ಬದ ಸಂಭ್ರಮ ನನ್ನಗೆ
ಬಾನುಲಿಯಲಿ ಬಂದೆರಗುವ ಆ
ನಿನ್ನೊಲವಿನ ಸಂದೇಶವ ಪಡೆದೆ
ನಾಚಿಕೆಯ ಮರೆಸಿಡಲಾಗದೆ
ನಲಿಯುವೆ ನೈದಿಲೆ ಹಾಗೆ
ಆರಂಭದ ಹಾರಾಟವನು
ಮುಂದುವರಿಸುವ ಆಸೆಯಲಿ
ಜಿಗಿಯುವೆ ಹೃದಯವ ಅಂಗೈಲಿರಿಸುತ
ನಿನಗೊಪ್ಪಿಸಲೆಂದೇ..
No comments:
Post a Comment