Monday, 12 October 2020

ದೋಣಿಯೇರುವುದಷ್ಟೇ ಅಲ್ಲ

ದೋಣಿಯೇರುವುದಷ್ಟೇ ಅಲ್ಲ 

ನಡೆಸುವುದನ್ನೂ ಕಲಿತಿರಬೇಕು 
ಹರಿವಿರಬೇಕು, ಆಳ ಅಡಿ ತಾಕದಂತೆ 
ದಿಕ್ಕು ಬದಲಾಗುತ್ತಾ 
ಉಬ್ಬು ತುಂಬಿ, ಜಾರು ಧುಮುಕಿ 
ಹರಿಗೋಲು ನಿಭಾಯಿಸಿದಂತೆ 
ತಟದಿಂದ ತಟಕ್ಕೆ 
ಪಯಣದ ಪಾಠ ಕಲಿಯುತ್ತಾ 

ಬರಗಾಲದಲ್ಲಿ ತಟಸ್ಥವಾಗಿದ್ದು 
ವರ್ಷಾಕಾಲದಲಿ ಸಾವರಿಸಿಕೊಂಡು 
ಸೆಳೆತದ ಧಾಟಿಯ ಗ್ರಹಿಸಿ 
ಅಲೆಗಳ ಎತ್ತರ ಅರಿತು 
ಸುಳಿಯಿಂದ ತಪ್ಪಿಸಿಕೊಳ್ಳುತ್ತ 
ಈಜುತ್ತಾ ದಡ ಮುಟ್ಟುವುದೋ 
ಅಥವ ಮುಳುಗುವುದೋ 
ಎಲ್ಲ ಪೂರ್ವ ತಯಾರಿಯ ಚಿತ್ತ 

ನದಿಗಳು ಕೂಡುತ್ತವೆ 
ಜೋಡಿ ದೋಣಿಗಳೂ ಸಿಗುತ್ತವೆ 
ಯಾರನ್ನೋ ಹಿಂಬಾಲಿಸಿ 
ಯಾರಿಂದಲೋ ಗತಿ ಬದಲಿಸಿ 
ಯಾರನ್ನೂ ದೂರುವಂತಿಲ್ಲ,
ಹಿಂಬಾಲಕರ ಇಂಗಿತ 
ಮುನ್ನಡೆದವರ ನಿರ್ಧಾರ 
ಗುರಿ ಬದಲಿಸದಿರಲಿ ಸಾಕು 

ಎದ್ದ ಬಿರುಕು ಮತ್ತೂ ಬಿರಿದು 
ರಿಪೇರಿಗೆ ಹವಣಿಸಿದಾಗ 
ಎದೆ ಗಟ್ಟಿ ಮಾಡಿಕೊಂಡು 
ಮತ್ತಷ್ಟು ದೂರ ತೇಲುವುದೋ 
ವಿರಾಮ ನೀಡುವುದೋ 
ನಿಲ್ಲುವುದೋ, ಬೇಡವೋ 
ಗೊಂದಲದ ನಡುವೆ ಕ್ರಮಿಸಿ 
ಮುಟ್ಟುವ ಕೊನೆಯೇ ಕೊನೆಯಾಗಬಹುದು 

ನದಿ ಆಕಾಶ ಕೂಡುವ ತಾಣ 
ಔತಣಕೆ ಕೂಗಿ ಕರೆದು 
ಎಷ್ಟು ಸಮೀಪವಾದರೂ 
ಅಷ್ಟೇ ಅಂತರ ಕಾದಿರಿಸಿಕೊಂಡದ್ದು 
ಕಸಿವಿಸಿಗೆ ಕಾರಣವಾಗಿ
ಕಣ್ಣೋಟ ದೂರದ ಆಹ್ವಾನಕ್ಕೆ ಮಾತ್ರ 
ತಲೆ ಬಾಗಿ ತೇಲಿತ್ತು,
ಇದು ನಿತ್ಯದ ವ್ಯಾಖ್ಯಾನ
ಮರು ದಿನ ದಿಗಂತವೇ ದೊರೆ...

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...