Sunday, 12 January 2020

ಎಲ್ಲಿಗೆಂದು ಹೇಳಬೇಡ ಕರೆದು ಹೋಗು ಮೆಲ್ಲಗೆ

ಎಲ್ಲಿಗೆಂದು ಹೇಳಬೇಡ
ಕರೆದು ಹೋಗು ಮೆಲ್ಲಗೆ
ಮರಳಿ ನನ್ನ ಗೂಡ ತೋರಿ
ತೊರೆಯಬೇಡ ಹಾದಿಯ
ಬಾಚಿ ತಬ್ಬಿ ಬೆಚ್ಚಗಿರಿಸಿ
ತೋಚಿದಂತೆ ನಗಿಸುತ
ಹೇಗೋ ಹಾಗೆ ಮಡಿಲಲಿರಿಸು
ಹಾಸಿ ಕನಸ ಕೌದಿಯ

ದೂರದೂರದಿ ಬೇರ ನೆಟ್ಟು
ಬೇಲಿ ಹಾಕುವೆ ಮನಸಿಗೆ
ವಾಲು ನನ್ನೆಡೆ ನನ್ನ ಹಾಗೆ
ಭುಜಕೆ ತಾಕಿಸಿ ಭುಜವನು
ಬಳ್ಳಿಯಂತೆ ನೀನು ನಾನು
ಅಂಕೆ ಮೀರಿ ಸುರುಳುತ
ಬಿದ್ದ ಹೂವ ಲೆಕ್ಕವಿಡುವ
ಹಂಚಿಕೊಂಡು ಬಾಳನು

ಕಣ್ಣ ಮುಚ್ಚಿ ತೋರು
ಆದರೆ ಬಣ್ಣಿಸು ನೀ ಬಣ್ಣವ
ಕಣ್ಣು ತೆರೆದು ನೋಡು
ಅಚ್ಚರಿ ಕಾದು ಕುಳಿತಿದೆ ಕಣ್ಣಲಿ
ನೀನು ರೂಪಿಸಿ ಹೋದ
ಮೌನವ ದಾಟಲಾರೆನು ಆದರೆ
ನೀನು ತೊಡಿಸಿದ ಗೆಜ್ಜೆ ಸದ್ದಿಗೆ
ಕುಣಿಯುವಾಸೆ ನನ್ನಲಿ

ಗಂಧ ತೀಡಿ ಕರಗುವಂತೆ
ಹರಡುವಂತೆ ಕಂಪನು
ನಿನ್ನ ಕಾಡಿಗೆ ಕಣ್ಣ ಕರಗಿಸಿ
ಉರುಳಿತೊಂದು ಕಂಬನಿ
ಕನ್ನೆಯಿಂದ ಕನ್ನೆಗಿಳಿಸಿ
ನಿನ್ನದೆಂಬಂತೆ ಬಿಂಬಿಸು
ಓಲೈಸುವೆ ಸಣ್ಣ ನಗುವಲಿ
ಭಾವ ವಿನಿಮಯವಾಗಲಿ

ನಮ್ಮ ನೆರಳ ಹಿಡಿದ ಕೊಳವು
ರಿಂಗಣಿಸಿದೆ ನಾಚುತ
ಆಚೆ ಈಚೆಗೆ ಸಾರಿ ಕುಣಿದಿದೆ
ತೇಲಿ ಬಿಟ್ಟ ದೀಪವು
ತಾರೆ ಉಟ್ಟ ಸೀರೆ ಹೊಳಪು
ಧಾರೆ ಎರೆದು ಜೊನ್ನ ಸಹಿತ
ನನ್ನ ಹುಡುಕುವ ಮುನ್ನ ಒಲಿಸಿಕೋ
ದಂಗೆ ಏಳಲಿ ನಭದಲಿ..

No comments:

Post a Comment

ಹೃದಯವ ನೀಡಲೇ

ಹೃದಯವ ನೀಡಲೇ ಹೇಳದ ಮಾತಿವೆ ನೂರಾರು ಆಲಿಸು ಈಗಲೇ ಪಾಲಿಸಿ ನಿನ್ನಯ ನೆರಳನು ಹೃದಯವ ನೀಡಲೇ ಹೊಂಗನಸ ಅಂಗಳದಿ ಅರಳಿರುವ ಚಂದಿರ ನೀ  ಯಾರಿರದ ತೀರದಲಿ ಅಲೆಗಳಲೂ ನಿನ್ನ ದನಿ  ...