ಏಕೆ ಮೀಟುವ ತಂತಿ ಕೊರಳಿಗೆ ಎರಗಿತು?
ಇಂದೇಕೆ ನಗಾರಿ ಬಾಸುಂಡೆಗಿಳಿದವು?
ಏಕೆ ಕೊಳಲು ಉಸಿರ ದೋಚೆ ಮುಂದಾಯಿತು?
ಯಾವ ಹಲಗೆ ತೊಗಲಿಗೆ ಕರೆ ಕೊಟ್ಟವು?
ಯಾವ ಪೋಷಾಕಿನಲಿ ಉತ್ತಮ ಎನಿಸುವೆ?
ಯಾವ ಗ್ರಂಥವು ಸ್ಪೂರ್ತಿ ನಿನ್ನ ಅಶಾಂತಿಗೆ?
ಯಾವ ಹೆಸರಿಗೆ ನೀ ಸ್ಪಂದಿಸುವೆ ನಿಜವಾಗಿ?
ಯಾವ ಮಣ್ಣಿಗೆ ನೀ ತಲೆ ಬಾಗುವೆ?
ಎಡವಿದ ಎಡಗಾಲ ಕತ್ತರಿಸು ಒಮ್ಮೆಗೆ
ಬಲದಲ್ಲೇ ಬಲವೆಂದು ಕುಂಟುತ್ತ ಸಾಗು
ಹಿಂದುಳಿದೆ ಎನಿಸಿದರೆ ಹೆಗಲ ಆಸರೆ ಇಗೋ
ಎಡ-ಬಲದ ನಡಿಗೆಯಲಿ ದಾಟು ದೂರ
ಹಿತವೆನಿಸುವವರೆಡೆಗೇ ಅಹಿತಕರ ಧೋರಣೆ
ನಿಷ್ಕರುಣಿ ಮನಸು ಮರುಭೂಮಿಯಂತೆ
ಪ್ರೇಮ ಚಿಗುರನು ಚಿವುಟಿ ವಿಷವುಣಿಸಿದೆ ಬುಡಕೆ
ನೆರಳಿತ್ತ ಮರವನ್ನೇ ಉರುಳಿಸಿದೆ ಹಗೆಗೆ
ನೀ ನಾಳೆ ಎಲ್ಲವನೂ ಬಿಟ್ಟು ಬದುಕಲು ಬಹುದು
ನಿನ್ನ ಕುರುಹುಗಳಲ್ಲೇ ಪ್ರಚೋದಿಸುತ್ತಿವೆಯಲ್ಲ!
ಒಬ್ಬರ ದನಿಯನ್ನು ಹೊಸಕಿ ಹಿಮ್ಮೆಟ್ಟಿದವ
ನಿನಗೆ ದನಿಯೆತ್ತುವ ಔಚಿತ್ಯವಿಲ್ಲ...!
No comments:
Post a Comment