Thursday 23 January 2020

ರೋಜಾ ತೋಟ ದಾಟಿದಂತೆ ನಿನ್ನ ಮನೆ

ರೋಜಾ ತೋಟ ದಾಟಿದಂತೆ ನಿನ್ನ ಮನೆ 
ತಾಜಾ ನೋಟ ಬೀರಿದಂತೆ ನಿಂತೆ ಸುಮ್ಮನೆ 
ಸಿಟ್ಟಿನಲ್ಲಿ ಸಿಕ್ಕಿಸುತ್ತ ದಾವಣಿ ನಡುವಿಗೆ 
ಆಹಾ ಲಟ್ಟಣಿಗೆ ಹಿಡಿದು ನಿಂತೆ ಮೋಹಿನಿ 

ಎಲ್ಲರೆದುರು ಅಷ್ಟು ಸದ್ದು ಮಾಡೋ ಕಿಂಕಿಣಿ 
ಒಂಟಿ ದಾರಿಯಲ್ಲಿ ಸಿಕ್ಕರಂತೂ ಕರಗೋ ಹಿಮ ಮಣಿ 
ತಲೆ ಎತ್ತಿ ನಡೆಯುತೀಯ ನಿನ್ನ ಊರಲಿ 
ಎಲ್ಲ ಸೊಕ್ಕ ಭಾರ ಹೊತ್ತುಕೊಂಡು ಟೊಂಕದಲಿ 

ದುಂಬಿ ಹಿಂಡು ಸಾಗುತಾವೆ ನಿನ್ನ ಹಿಂದೆ 
ರೋಜಾ ಹೂವ ಜೇನ ಹೀರೋ ನೆವದಲಿ 
ನಾನು ಸಗಟು ಖರೀದಿಗೆ ಬರುವೆನು 
ದಿನವೂ ಬೇರೆ ಗ್ರಾಹಕನ ಸೋಗಿನಲ್ಲಿ 

ನೆನ್ನೆಗಿಂತ ಕೆಂಪೇರಿದಂತಿದೆ ಅನ್ನುವೆ 
ನಿನ್ನ ಚಿತ್ತ ಹಬ್ಬಿದಾಗ ತೋಟದಿ 
ಅಚ್ಚರಿಯ ರಂಗು ಹರಿದು ಗಲ್ಲಕೆ 
ಕೆಂಗುಲಾಬಿ ಬಿತ್ತು ಅಲ್ಲೇ ನನ್ನ ಕಣ್ಣಿಗೆ 

ವ್ಯಾಪಾರ ಮುರಿದರೂ ಸಂಬಂಧ ಕುದುರಿತು 
ಮನಸ್ಸೆಂಬ ತೋಟದಲ್ಲಿ ಅನುರಾಗ ಅರಳಿತು 
ಬಳಿ ಬಳ್ಳಿಯಲ್ಲೂ ನಾಳೆಗೊಂದು ಹೊಸ ಮೊಗ್ಗು 
ದುಂಬಿಯ ಪರಾಗ ಸ್ಪರ್ಶವಾಗಿ ದಳಕೆ ಸಿಗ್ಗು

ಇನ್ನೂ ತೋಟ ಕಾಯೋ ಕೆಲಸ ನನ್ನದು
ನನ್ನ ಪ್ರೀತಿ ಮಾಡೋ ಕೆಲಸ ಮಾತ್ರ ನಿನ್ನದು 
ನಮ್ಮದೊಂದು ಪುಟ್ಟದಾದ ಲೋಕ ಬೇಲಿ ಒಳಗಿದೆ 
ಅದರ ಆಚೆ ಹೊತ್ತು ಉರಿವ ಜನರ ಹೊಟ್ಟೆ ಕಿಚ್ಚಿದೆ... 

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...