Thursday 30 January 2020

ಪಿಸ್ತೂಲಿನ ಸ್ವಗತ

ಕೊಂದವನ ಮತ್ತು ಸತ್ತವನ ನಡುವೆ ಪಿಸ್ತೂಲು 
ಒಂದೆರಡು ಗುಂಡು ಹಾರಿ ಋಣ ಭಾರ 
ಕೊಂದವನ ತೂಕ ಹೆಜ್ಜೆ, ಸತ್ತವನ ಮೌನ 
ಇನ್ನುಳಿದ ಗುಂಡುಗಳ ಸ್ವಗತ 

ಸತ್ತವ ಕೆಟ್ಟವನೋ, ಒಳ್ಳೆಯವನೋ?
ಕೊಂದವನು ಕೈ ಬಿಡದ ತನಕ 
ಅವನೇ ಒಳಿತು, ಒಳಿತಿಗಾಗಿ
ಚಿಮ್ಮಿದ ರಕ್ತವು ಕೈಗಂಟಿದೆ 
ವಿಚಲಿತಗೊಳ್ಳದೆ ಹಿಡಿಯ ಬಿಗಿದಿಟ್ಟ
ಭಾರಿ ಘಟ್ಟಿಗನೇ ಸರಿ 

ಇನ್ನೂ ಮೂಡದೇ ಆಕ್ರಂದನ?
ಒಂದು, ಸತ್ತವ ನೀಚನಾಗಿರಬೇಕು 
ಇಲ್ಲವೇ ಆಳುವವರ ಉಸಿರು ಬಿಗಿದಿರಬೇಕು 
ಪಾದಗಳು ಇನ್ನೂ ಒದರಾಡುತ್ತಲಿವೆ 
ನಿಮಿಷ ನಿಂತು ನೋಡೋಣ..... 

ಆ ಎರಡು ಸುತ್ತಿನ ಬಳಿಕ 
ಯಾವೊಂದು ಪ್ರತಿ ದಾಳಿಯಿಲ್ಲ?
ಅಸ್ತ್ರಗಳಿಲ್ಲದ ಶಾಂತ ತೋಟಕೆ ನುಗ್ಗಿ 
ಪ್ರತಾಪ ಮೆರೆದನೇ ಮಾಲೀಕ?
ಇಲ್ಲ, ಇಲ್ಲ.. ಹೇಡಿಯಾಗಿರಲಾರ 
ಹೇಡಿಗೆ ಪಿಸ್ತೂಲು ಹಿಡಿವ ಸ್ಥೈರ್ಯ?
ನಮ್ಮ ಸಂಗ ಮಾಡುವವ ಪರಾಕ್ರಮಿ... 
ಎದುರಾಳಿ ಸಂಚು ರೂಪಿಸುತ್ತಿರಬೇಕು 
ಇವ ಎದೆ ಹಿಗ್ಗಿಸಿ ನಿಂತಿರಬೇಕು!

ಯಾರದ್ದೋ ಅಂತಿಮ ಯಾತ್ರೆ
ಸಣ್ಣ ಮರುಕದ ಕೂಗು 
ಹೂವು, ಗಂಧ, ಕಣ್ಣೀರ ಕಂಪು ದಾಟಿ ಸಾಗಿದೆ ಮುಂದೆ
ಕೊಂದವನ ಎದೆಯಲ್ಲಿ ಕ್ರಮೇಣ ಆರಿದ ಕಿಚ್ಚು...  

ಅರೆ.. ಈಗ ಈತನೂ ಉದ್ರೇಕಕ್ಕೊಳಗಾದನಲ್ಲ?
ಮತ್ತಾರೋ ಇವನಿಗೆ ಹೆಗಲು ಕೊಟ್ಟು ಸಂತೈಸುತ್ತಿದ್ದಾರೆ 
ಅವನೆದೆಯಲ್ಲಿ ನಮ್ಮೆದೆಯ ಮಾರ್ದನಿ 
ಕೊಲ್ಲಲ್ಪಟ್ಟವನೇ ಆಗಿರಬಹುದೇ? ಓ.. ಅವನೇ!
ಇತ್ತ ಮತ್ತಾರೋ ಇವನಿಂದ ಪಿಸ್ತೂಲು ಕಸಿದು ಓಡುತ್ತಿದ್ದಾರೆ 
ಮತ್ತಷ್ಟು ಹೆಣಗಳುರುಳುವ ಸಂಭವ... 

ಯಾರ ಹೆಸರು ಬರೆದಿದೆ ನಮ್ಮಗಳ ಮೇಲೆ?
ಕೂಡಲೇ ಅಳಿಸಿ ಹಾಕಬೇಕು 
ಕೊಲ್ಲುವವರಿರುವ ತನಕ ಸಾಯುವವರು 
ಕೊಂದು ಉಳಿಸುವುದಾದರೂ ಏನನ್ನ?

ಮತ್ತೊಂದು ಗುಂಡು.. ಢಮ್!!
ಮತ್ತೆರಡು..ಮತ್ತೆ ....  ಢಮ್!! ಢಮ್!!
ಕಾಲ ಕಾಲಕ್ಕೆ ಸದ್ದಿಗೆ ಸದ್ದು ಸೆಡ್ಡು ಹೊಡೆದು 
ನಿಗ್ರಹಿಸುತ್ತಿದೆ ಎದ್ದ ದನಿಗಳ 
ನಮ್ಮಂಥ ಪಾಪದ ಗುಂಡುಗಳಿಗೆ ಬೇರೆ ಆಯ್ಕೆಯೆಲ್ಲಿ?
ಪಿಸ್ತೂಲಿನಿಂದ ಪಿಸ್ತೂಲಿಗೆ 
ಮನುಷ್ಯನಿಂದ ಮನುಷ್ಯನಿಗೆ 
ವರ್ಗಾವಣೆಯಾಗುತ್ತಲೇ ಸಾಯುತ್ತಿದ್ದೇವೆ... 

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...