ದೊಣ್ಣೆ ಹಿಡಿದ ನಿನ್ನ ಕೈಯ್ಯಿ ಎಷ್ಟು ದುರ್ಬಲ
ಮುಸುಕು ತೊಟ್ಟು ಬಂದೆ ನಿನ್ನ ರಾಕ್ಷಸತ್ವಕೆ
ನೀ ರಾಡಿಗೊಳಿಸಿ ಹೋದ ಹಾದಿ ನಿನ್ನದೇ
ನೆತ್ತರ ಮಜ್ಜನದಲ್ಲಿ ತೊಳೆಯೆ ಬಂದೆಯಾ?
ನೋಡಿಲ್ಲಿ ಗಾಯಗೊಳದ ತಲೆಗಳಿಷ್ಟಿವೆ
ಎಲ್ಲವನ್ನೂ ಬೀಸಿ ಬರಲು ಲಾಠಿ ಎಷ್ಟಿವೆ?
ಬೆರಳಚ್ಚು ಬಿಟ್ಟೆ ಒಡೆದು ನಿನ್ನ ಮನೆಯನೇ
ನಿನ್ನ ನೀನೇ ಕಳೆದು ಬಿಟ್ಟೆ ಎಲ್ಲಿ ಹುಡುಕುವೆ?
ಮಾತಿಗೊಂದು ಮಾತು ಬೆಳೆಸು, ನನ್ನ ಮಾತ ಪೂರ್ತಿಗೊಳಿಸು
ನೀನೇ ನೀನು, ನಾನೇ ನಾನು. ಅಖಾಡದಲ್ಲಿ(ದೇಶದಲ್ಲಿ) ನೀನೂ -ನಾನೂ
ನಿನ್ನ ಮಾತೇ ಗೆಲ್ಲಲೆಂದು ಇನ್ನೂ ಜೋರು ಕೇಳಿಸು
ಕಡೆಗೆ ನನ್ನದನ್ನೂ ಚೂರು ದೂರ ನಿಂತು ಆಲಿಸು
ನಾನು ಘಾಸಿಗೊಂಡಾಗ ತಾಯಿ ಭಾಷೆ ಚೀರಿತು
ಅಲ್ಲಿ ನಿನ್ನ ತಾಯಿ ಗುರುತು ಬರಲಿಲ್ಲ ಏತಕೆ?
ಹೆಣ್ಣು, ಗಂಡು ತಾರತಮ್ಯ ಮಾಡಲಿಲ್ಲ ದಾಳಿಯು
ಅಂದಮೇಲೆ ನಾನು ನೀನು ಬೇರೆ ಅನಿಸಿತೇತಕೆ?
ಕಳಚಿ ಬಾ ಮುಖವಾಡ ಅಪ್ಪಿಕೊಳ್ಳುವೆ
ನೀನು ನೀನಾಗಿ ಇರು ಒಪ್ಪಿಕೊಳ್ಳುವೆ
ನನ್ನ ನಿನ್ನ ನಡುವೆ ಈ ಬೇಲಿ ಇಂದಿಗೆ
ನಾಳೆ ಅಳಿಸಿ ಹೋದರಲ್ಲಿ ಏನು ಮಾಡುವೆ?
No comments:
Post a Comment