Wednesday, 29 January 2020

ಬಿಡುವಾದರೆ ಹೇಳು ಬಿಡಿಸಿ ಹೇಳುವೆ

ಬಿಡುವಾದರೆ ಹೇಳು ಬಿಡಿಸಿ ಹೇಳುವೆ 
ತಡ ಮಾಡದೆ ಹೃದಯ ನೀಡಿ ಮುಗಿಸುವೆ 
ಗಡಿಯಾರವು ಗಡುವು ನೀಡಿ ಕಾದಿದೆ 
ಸಮಯ ಮೀರದ ಹಾಗೆ ಚಿತ್ತ ವಹಿಸುವೆ 

ಕಡೆಗೋಲಿಗೆ ಗಡಿಗೆ ತೆರೆದ ತೋಳಲಿ 
ಕಡಿದ ಮಜ್ಜಿಗೆಯ ಬೆಣ್ಣೆ ಮುದ್ದೆಯೇ 
ಕೊಡದೇ ಹೋಗದೆ ನೀ ಕಡೆಗೆ ಸಮ್ಮತಿ
ಕರಗೋ ಕಾಡಿಗೆಯ ಹೇಗೆ ತಡೆಯುವೆ?

ಬೆಳಗು ಮೂಡುವುದೇ ನಿನ್ನ ನೆನಪಲಿ 
ಮುಗುಳು ಮಾಸದೆಲೆ ಇದ್ದ ಹುರುಪಲಿ 
ಕದ್ದು ನೋಡುವುದು ಸಾಕೆಂದನಿಸಿರಲು 
ಖುದ್ದು ಹಾಜರಿಯ ಕೊಟ್ಟೆ ಕನಸಲೂ 

ಬಿತ್ತಿ ಚಿತ್ರಗಳ ಬಿಡಿಸಿ ಬಂದೆ 
ಮನೆಯ ಸುತ್ತ ಮನದ ಬಣ್ಣ ಹಚ್ಚಿ
ಹಿತ್ತಲಲ್ಲಿ ಮಲ್ಲೆ ಗಿಡವ ನೆಟ್ಟೆ 
ನೀ ತಾಕಿ ಹೂವು ಬಿರಿಯಲೆಂದು ಗರಿಯ ಬಿಚ್ಚಿ 

ಪೋಷಾಕಿನಲ್ಲೂ ಕಂಡು ಹಿಡಿವೆ 
ಆಗದಂಥ ಮೋಸಕ್ಕೂ ನೀ ಸುಂಕ ಪಡೆವೆ 
ಉಪವಾಸ ಕೆಡವಿ ಬಿಡುವೆ ನನ್ನ 
ಮಾತಿಗವಕಾಶ ಕೊಟ್ಟಂತೆ ಕಸಿದು ಬಿಡುವೆ 

ತೆರೆದೋದು ಸರಣಿ ಲೇಖನವನ್ನ 
ಪ್ರೇಮವಲ್ಲದೆ ಬೇರೇನೂ ಬರೆದವನಲ್ಲ 
ಸಹಮತದ ಸಹಿ ಹಾಕಿ ಸುತ್ತೋಲೆಯನು
ಕಳಿಸು ಮನಸಿಗೆ ಮಾಹಿತಿ ಸಿಕ್ಕಂತಿಲ್ಲ.... 

No comments:

Post a Comment

ಹೃದಯವ ನೀಡಲೇ

ಹೃದಯವ ನೀಡಲೇ ಹೇಳದ ಮಾತಿವೆ ನೂರಾರು ಆಲಿಸು ಈಗಲೇ ಪಾಲಿಸಿ ನಿನ್ನಯ ನೆರಳನು ಹೃದಯವ ನೀಡಲೇ ಹೊಂಗನಸ ಅಂಗಳದಿ ಅರಳಿರುವ ಚಂದಿರ ನೀ  ಯಾರಿರದ ತೀರದಲಿ ಅಲೆಗಳಲೂ ನಿನ್ನ ದನಿ  ...