Wednesday 29 January 2020

ಅಲೆಯ ಹೊಡೆತಕೆ ಸಿಕ್ಕ ಚಿಪ್ಪು

ಅಲೆಯ ಹೊಡೆತಕೆ ಸಿಕ್ಕ ಚಿಪ್ಪು 
ಕಡಲ ತೀರದಿ ಅವಿತು ಕುಂತು
ಮರಳ ಮನೆಯ ಕಟ್ಟೋ ಗಳಿಗೆ 
ಅಂಗೈಯ್ಯೇರಿ ಕುಳಿತುಕೊಂತು 
ತಡವಲು ಮೈ ಇದ್ದ ಮರಳು 
ನೀರ ಸಹಿತ ಜಾರಿಕೊಂಡು 
"ಒಯ್ಯಿ ನನ್ನ ನಿನ್ನ ಮನೆಗೆ 
ನೆನಪಿನ ಗುರುತಾಗಿ" ಅಂತು 

ಚಿಪ್ಪು ಚಿಪ್ಪಲೂ ಭಿನ್ನ ಕತೆಗಳು 
ಇಟ್ಟು ಆಲಿಸೆ ಕಿವಿಯ ಹತ್ತಿರ 
ಒಂದು ಹಾಡಿತು ಮನವ ಕಾಡಿತು 
ಒಂದು ಕಣ್ಮನ ಸೂರೆಗೊಂಡಿತು 
ಸಾಗಿ ಸವೆದು ಸವಕಲಾಗಿ 
ಸೋಕಿದಲ್ಲೇ ಛಿದ್ರಗೊಂಡಿತು 
ಮಿಕ್ಕ ಕೆಲುವು ಬೆರಳ ನಡುವೆ 
ತೂರಿ ಮತ್ತೆ ಕಡಲ ಸೇರಿತು 

ದಿಕ್ಕು ಕಾಣದೆ ಅಲೆದು ಬಂದು 
ದಿಕ್ಕುಗೆಟ್ಟವರನ್ನು ಸೇರಿ 
ದಕ್ಕುವ ಮಡಿಲಲ್ಲೇ ಸುಖವ 
ಕಾಣುವಂತೆ ನಿಲುವು ತಾಳಿ 
ಸಿಕ್ಕ-ಸಿಕ್ಕವರಡಿಗೆ ಸಿಕ್ಕಿ 
ಪಾದ ಗುರುತುಗಳಲ್ಲಿ ಬಿಕ್ಕಿ 
ಉಪ್ಪು ಕಣ್ಣೀರೇತಕೆಂದು 
ನಿರ್ಭಾವುಕವಾಯಿತು  

ಆಳ ಹೊಕ್ಕು ಮೇಲೆ ಜಿಗಿದು 
ತೇಲಿ, ಮುಳುಗಿ, ಬೇಲಿ ಹಾರಿ 
ಯುಗ ಯುಗಗಳ ಯಾನ ಮುಗಿಸಿ 
ಬೆನ್ನು ಕೊಟ್ಟಿತು ಮಣ್ಣಿಗೆ 
ಚಂದಗಂಡು ಹೊತ್ತು ಹೋದರು 
ತೋಚಿದಂತೆ ಕೊರೆದು ಬಿಟ್ಟರು 
ಗುಟ್ಟು ಗುಟ್ಟಾಗಿರಿಸಲೆಂದು 
ಬಚ್ಚಿ ಇಟ್ಟರು ಕಿಸೆಯಲಿ 

ಮುತ್ತು ಕಸಿದು ಚಿಪ್ಪ ಎಸೆದು 
ಮಾಲೆ ಮಾಡಿ ಕೊರಳಿಗೆರಗಿ 
ಇರುಳ ಉರಿಸಿ ಪ್ರೇಮ ಉತ್ಸವ 
ಮಾಡ ಹೊರಟರು ಮುಕ್ತಿಗೆ 
ಎಲ್ಲ ಕಂಡೂ ಕಳ್ಳರಂತೆ 
ಎಲ್ಲ ಅರಿತೂ ಮಳ್ಳರಂತೆ 
ಮುತ್ತು ಮುತ್ತಲೂ ಮೈಯ್ಯ ಮರೆಯಲು 
ಮಾಲೆ ಚೆದುರಿತು ಒಮ್ಮೆಗೆ...!

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...