Wednesday, 8 January 2020

ಹಸಿ ವನಕೆ ಕಿಚ್ಚು ಸೋಕಿ ಗಾಳಿಯೆಲ್ಲ ಮಬ್ಬು

ಹಸಿ ವನಕೆ ಕಿಚ್ಚು ಸೋಕಿ ಗಾಳಿಯೆಲ್ಲ ಮಬ್ಬು 
ಮಸಿ ಬಳಿದ ಮನಸಿಗಿನ್ನೂ ಇಳಿಯಲಿಲ್ಲ ಕೊಬ್ಬು 
ಗಸಿ ಬಿಡದೆ ನುಂಗಿ ಹೊಟ್ಟೆ, ಹಸಿವು ಎಷ್ಟು ಘೋರ 
ಕಿಸೆಯಲುಳಿದ ಕಸ-ಕಡ್ಡಿ ಕಾಸಿಗಿಂತ ಭಾರ 

ತೂತು ತಳ ಸೋರಿ ಮಡಿಕೆ, ಒಲೆಗದೇ ಕೇಡು
ಜೋಡೆತ್ತು ಹೊಲದಲ್ಲಿ ಇಟ್ಟ ಸಗಣಿ ಹೊನ್ನು
ಕಾಡಕ್ಕಿ ನಾಡಲ್ಲಿ ಕಳೆದು ಅತ್ತು ಹಾಡು
ಬೆನ್ನಿಗೂ ಭೂಮಿಗೂ ಹುಟ್ಟಿನಿಂದ ಈಡು

ಕರಗಿದ ಬೊಟ್ಟಿಗೆ ಮೂಗ ತುದಿ ಕೆಂಪು
ಸಿಂಬೆಗೆ ಒರಗಿ ಬುತ್ತಿ ಹೊತ್ತ ಕನಸ ಕಣ್ಣು
ನೆರಳಿನ ಆಟದಲ್ಲಿ ಬೆಳಕಿಗೂ ಪಾಲು
ಬೆರಣಿಯ ಮುಖ ತುಂಬ ಬೆರಳ ಗುರುತುಗಳು

ಹಿಮ ಕರಗಿ ನೀರಾಗಿ ಹರಿವ ಕೊಟ್ಟೊನು
ತಿರು-ತಿರುಗಿ ಬುಗುರಿಯ ಹಾಗೆ ಕುಣಿಸೋನು
ಬರಗಾಲ ಬೆನ್ನಿಗೆ ಮಳೆಯನ್ನ ಕಟ್ಟಿ
ಕುಸ್ತಿಲಿ ಜಟ್ಟಿ ಬಿದ್ದಾಗ್ಲೇನೇ ಗಟ್ಟಿ

ಇಕ್ಕಟ್ಟಿನ ಸಂತೆಲಿ ಮೈ ಮುರಿಯೋ ಚಾಳಿ
ಬೇಡ, ಬೇಕುಗಳನ್ನ ಕಾಯಲ್ಲ ಬೇಲಿ
ಒಂದು ಗೆರೆ ಎಳೆದು, ನಂದೇ ಅಂತನಿಸೋದು..
ಆಟಿಕೆ ಮುರಿದಾಗ ಮಗುವಂತೆ ಅಳಿಸೋದು..

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...