Thursday, 15 December 2022

ಬರುವೆ ತುಸುವೇ ದೂರ

ಬರುವೆ ತುಸುವೇ ದೂರ

ಸಲುಗೆ ಬಯಸಿ ಪೂರ
ಇದೇ ಶುಭ ಸೂಚನೆಯೋ
ಒಲವ ಸವಿ ಭಾವನೆಯೋ
ಮನದ ಕರೆಯೋಲೆಯಿದು
ಬರುವೆ ತುಸುವೇ ದೂರ
ಸಲುಗೆ ಬಯಸಿ ಪೂರ

ನನ್ನಲ್ಲೊಂದು ಕವಿತೆ ಸಾಲು
ಬಾಕಿಯಿದೆ ನಿನಗಾಗಿ
ಹೇಳಿ ಬಿಡುವೆ ಚೂರು ತಾಳು
ಮೂಡುವುದು ಹಿತವಾಗಿ
ನೀನಿರದೇ ಹೇ.. 
ಹೇಗಿರಲಿ ಹೇಳೆ ಸಖಿ
ಸುಖದ ಸಮಪಾಲಿಡುವೆ
ಅಳುವೇ ಬರದಾಗಿಸುವೆ
ಮನದ ಅಭಿಲಾಷೆಯಿದು
ಬರುವೆ ತುಸುವೇ ದೂರ
ಸಲುಗೆ ಬಯಸಿ ಪೂರ

ಮರೆತು ಬಿಡುವೆ ನನ್ನೇ ನಾನು
ಪರಿಚಯಿಸು ಹೊಸತಾಗಿ
ನಿನಗೂ ನನಗೂ ಒಂದೇ ರೀತಿ
ಪ್ರೇಮ ಜ್ವರ ಶುರುವಾಗಿ
ದಾರಿಗಳು ಊ.. 
ನೂರಾರಿವೆ ಸಾಗಿರಲು
ಅನುಭವಿಸಿದೆ ಹೃದಯ
ಪ್ರಣಯ ಕಲಿಸೋ ವಿಷಯ
ಮನದ ಪರಿಪಾಟಲಿದು..
ಬರುವೆ ತುಸುವೇ ದೂರ
ಸಲುಗೆ ಬಯಸಿ ಪೂರ

ಗಝಲ್

ಸಾಕು ನಾಯಿಯ ಸಂಗಾತಿಯಂತೆ ಸಲಹುವವರು ಅನೇಕರು ಸಿಗುವರಿಲ್ಲಿ

ಜೀವನ ಸಾತಿಯ ನಾಯಿಯಂತೆ ಕಾಣುವವರೂ ಅನೇಕರು ಸಿಗುವರಿಲ್ಲಿ

ತಾವು ಪ್ರಶ್ನಾತೀತರೆಂದು ಹಿಗ್ಗಿದೆದೆಯ ಉರಿ ಉಸಿರ ಕಕ್ಕುತಲೇ
ತಮ್ಮ ಸವಾಲುಗಳಿಗೆ ಸಲೀಸು ಉತ್ತರ ಬಯಸುವವರು ಸಿಗುವರಿಲ್ಲಿ

ಆತ್ಮಗಳು ಸುಳ್ಳು, ಕಟ್ಟು ಕತೆ, ವ್ಯರ್ಥ ಸಮಯ ಎಂದು ಜಾರಿಕೊಂಡು
ಆತ್ಮವಂಚನೆಗೆ ಸಮಯ ಸಾಲದೆಂಬಂತೆ ಬದುಕುವವರು ಸಿಗುವರಿಲ್ಲಿ

ಬಿದ್ದಲ್ಲಿ ಬೆಳೆವ ಬೀಜವಾಗದೆ, ಬೆಳೆದಲ್ಲಿ ಬಾಗಿದ ನೆರಳಾದಗೆ
ಬಿಲದಲ್ಲಿ ಅಡಗಿ ಕಾಲೆಳೆವುದೇ ಪರಾಕ್ರಮವೆಂದು ಬೀಗುವವರು ಸಿಗುವರಿಲ್ಲಿ

ಹಗಲೆಲ್ಲ ಕನವರಿಸಿ, ಇರುಳಲ್ಲಿ ಬೆಳಕ ಅರಸಿ ಪರಿತಪಿಸುವ ಪ್ರೆತಗಳ
ಜೊತೆಗಾರರಾಗಿಸಿಕೊಂಡು ಪಯಣ ಸಾಗಿಸುವವರು ಸಿಗುವರಿಲ್ಲಿ

ಮುಟ್ಟಿಸಬೇಕಾದ ಎದೆಷ್ಟೋ ಸದ್ವಿಚಾರಗಳ ಮಣ್ಣಲ್ಲಿ ಮುಚ್ಚಿಟ್ಟು
ಹೇಳಬಾರದ್ದನ್ನೇ ಒತ್ತಿ-ಒತ್ತಿ ಹೇಳುವ ವಾಚಾಳಿ ಗುಣದವರು ಸಿಗುವರಿಲ್ಲಿ

ಒಂದು ಕಣ್ಣಲಿ ಕಿಚ್ಚು, ಮತ್ತೊಂದರಲ್ಲಿ ಕಣ್ಣೀರು ಹಾಕುತ್ತ
ರಂಗ ವೇದಿಕೆಯಲ್ಲಿ ತಮಗಿಂತ ಯಾರಿಲ್ಲವೆಂದು ನಟಿಸುವವರು ಸಿಗುವರಿಲ್ಲಿ

ಜೀವ ಸಖಿ 2

ಜೀವ ಸಖಿ

ಸುಡುವಾಗ ಹೀಗೆ ನಿನ್ನ ಕಾಂತಿಯಲ್ಲಿ
ನಾ ಕರಗದಿರಲು ಮನಃ ಶಾಂತಿಯೆಲ್ಲಿ

ಹೇಳಬೇಡ, ಹೇಳಬೇಡ
ನೀ ಎಲ್ಲವ ಕಣ್ಣಲ್ಲಿಯೇ
ಮಾತೇ ಅರ್ಥವಾಗದಂಥ
ಮತಿಹೀನ ನಾ...
ಕಾಣಿಸದ ಹಾಗೆ
ನಾ ಬರಲೇ ಹೇಳು
ಬರೆದಿಡುವೆ ನಿನಗೆ
ನನ್ನೆದೆಯ ಸಾಲು

ಬಾಳಿಗೊಂದು ಕನ್ನಡಿಯ
ನಾ ಹಿಡಿದರೆ, ನೀ ಕಾಣುವೆ
ನಿನ್ನ ವಿನಃ ಊಹೆಯಲ್ಲೂ
ಚೂರಾಗುವೆ.. 
ಕಾಗದವ ಗೀಚಿ
ಪ್ರೀತಿಸುವುದಲ್ಲ
ಶಾಸನದ ಹಾಗೆ
ಅಳಿಯುವುದೇ ಇಲ್ಲ

ಮಾತಿರದೆ ಆವರಿಸು

ಮಾತಿರದೆ ಆವರಿಸು

ಆ ಮೌನವನ್ನು ಕಾಪಾಡಿಕೊಂಡು
ನಾ ಮೂಕನಾಗಿ ಹೋಗುವೆ
ಕಾಯಿಸದೆ ಸ್ವೀಕರಿಸು
ಈ ಹೃದಯವಿನ್ನು ನಿನಗಾಗೇ ಎಂದು
ನಾ ಜನುಮವೆಲ್ಲ ಕಾಯುವೆ
ಜೀವವೇ.....

ಚಂದಿರನೇ ಚಂದಿರನೇ
ನಿಲ್ಲದೆ ಓಡುವೆಯಾ
ಪ್ರೇಮಿಗಳನು ನೀನೇ
ಸೇರಿಸಿ ಬಿಡುವೆಯಾ?... 

ಉಪಕಾರವೊಂದು ಬೇಡುವೆ ನಿನ್ನಲೀ
ಬೆರಳನ್ನು ಹಿಡಿದೇ ಸಾಗು ನೀ
ಪರಿಹಾರ ಬೇರೆ ಏನನು ನೀಡಲಿ
ಒರೆಸಾದ ಮೇಲೆ ಕಂಬನಿ
ನೀನಿರದೆ ರತ್ರಿಗಳು
ಯಾಕಿಷ್ಟು ಕ್ರೂರ, ಉಸಿರಾಟ ಭಾರ
ನೀ ನನ್ನ ತೀರ ಸೇರದೆ
ಜೀವವೇ.....

ಚಂದಿರನೇ ಚಂದಿರನೇ
ನಿಲ್ಲದೆ ಓಡುವೆಯಾ
ಪ್ರೇಮಿಗಳನು ನೀನೇ
ಸೇರಿಸಿ ಬಿಡುವೆಯಾ?... 

ಉರಿದಷ್ಟೂ ಮೇಣ ಕರಗುವ ಹಗೆಯೇ
ನಿನ್ನೆದುರು ನಾನು ಸೋಲುವೆ
ಬೆರೆತಷ್ಟೂ ಮೂಡೋ ಅಂತರ ಏತಕೆ
ನಿನ್ನಲ್ಲೇ ವಾಸ ಮಾಡುವೆ
ಕಾಣಿಸದೆ ಹೋದರೆ ನೀ
ಈ ನನ್ನ ದನಿಗೆ, ಉಳಿಗಾಲವಿಲ್ಲ 
ಕೂಗೋದು ಹೇಗೆ ನಿನ್ನನು
ಜೀವವೇ..‌...

ಚಂದಿರನೇ ಚಂದಿರನೇ
ನಿಲ್ಲದೆ ಓಡುವೆಯಾ
ಪ್ರೇಮಿಗಳನು ನೀನೇ
ಸೇರಿಸಿ ಬಿಡುವೆಯಾ?... 
ಆಗು ನೀ ರಾಯಭಾರಿ
ಪ್ರೀತಿಯ ಪಾಲಿಗೆ
ದಾರಿಯ ತೋರಿಸು
ಪ್ರೀತಿಸೋ ಅಂಧರಿಗೆ
ದಾಟಿಸು ಮುಳ್ಳುಗಳ
ಚೆಲ್ಲುತ ಬೆಳದಿಗಳಲ್ಲಿಯೇ
ಇರುಳನು ಗೆಲ್ಲುವ ಬಲವಿದೆ 
ಚಂದಿರನೇ ಚಂದಿರನೇ
ನಿಲ್ಲದೆ ಓಡುವೆಯಾ
ಪ್ರೇಮಿಗಳನು ನೀನೇ
ಸೇರಿಸಿ ಬಿಡುವೆಯಾ?... 

ನಿನ್ನ ಮಾತು ನನಗೆ ಅರ್ಥವಾಗದು

 ನಿನ್ನ ಮಾತು ನನಗೆ ಅರ್ಥವಾಗದು

ಮೌನದಲ್ಲೇ ನಡೆಯುತಿರಲಿ ಸಂವಹನ
ಪ್ರೀತಿಯಲ್ಲಿ ಏನೂ ಗೊತ್ತೇ ಆಗದು
ಆದರೂ ನಿನ್ನೆಡೆಗೇ ಈ ಗಮನ

ಹೋಗಬೇಡ‌ ನೀ ಜೊತೆಗೇ ಇರು

*ದೂರವೇಕೆ ನೀ ಜೊತೆಗೇ ಇರು

ನನ್ನ ನೆರಳಲ್ಲಿ ನೆರಳಾಗಿರು*

ಹೋಗಬೇಡ‌ ನೀ ಜೊತೆಗೇ ಇರು
ಚೂರು ತಡವಾದರೇನು ಬಿಡು

ಅಂತರ ಮೂಡಲು
ಕೊಂಚ ದಿಗಿಲಾಗಿದೆ
ಒಂಟಿಯಾದಾಗ ಬೇನೆ ಶುರು

ನನ್ನ ಏಕಾಂತಕೆ 
ಮುನ್ನುಡಿ ಗೀಚಲು
ಹೇಳು ನಿನ್ನಲ್ಲೂ‌ ಉಸಿರಾಟ ಬಿಗಿಯಾಯಿತೇ
ಆಸೆ ಕಣ್ಣಂಚಿಗೆ ವಾಲುತಾ
ಕೆನ್ನೆಯ ಮೇಲೆ ಮನಸಾಯಿತೇ

ಬಂಧನ ಮಾಡಿಕೋ
ನಿನ್ನಲಿ ನನ್ನನ್ನು
ಪ್ರೀತಿ ವಿನಹ ಈ ಬಾಳಲ್ಲಿ ಹಿತವೆಲ್ಲಿದೆ
ಕಂಡ ಕನಸೆಲ್ಲವೂ ನಿನ್ನದೇ
ತೋಳಿಗೂ ನೀನೇ ಬೇಕಾಗಿದೆ

ಬಿಡದೆ ಹಿಂಬಾಲಿಸೋ ವೇಳೆ ಕಣ್ಣಾಯಿಸು
ಒಮ್ಮೆ ಆ ತುಂಟ ನಗೆ ಕಂಡು ಹಗುರಾಗುವೆ
ಬೇರೆ ಏನನ್ನೂ ನಾ ಬೇಡೆನು
ನಿನ್ನ ಮಡಿಲಲ್ಲಿ ಮಗುವಾಗುವೆ...

ಕರೆದಾಗ ನೀ

ಕರೆದಾಗ ನೀ

ಬೆರಗಾಗಿ ನಿಲ್ಲದಿರು
ನೋಡದೆ ಹಾಗೆ
ನಿನ್ನ ಪಾಡಿಗೆ ಸಾಗುತಿರು
ನೀ ನಿಂತೆಡೆಯೇ
ನಾ ಬೇರು ಊರಿ
ಮರವಾಗಲೇನು
ನೆರಳಲ್ಲಿ ನಿನ್ನ
ಇರಿಸಬೇಕಿದೆ
ಬೆರಳನ್ನು ತಾಕಿ
ಕುಣಿಯಬೇಕಿದೆ

ಅದಲು ಬದಲಾಗಿ

ಅದಲು ಬದಲಾಗಿ

ಹೃದಯ ಕುಳಿತಂತೆ ಮಾತಿಗೆ
ತೊದಲೋ ಮಾತಲ್ಲೇ
ಒಲವು ಮೊದಲಾಗೋ ವೇಳೆಗೆ
ಒಂದಾಗಿವೆ ಕಂಗಳು
ನೂರಾಸೆಯ ಹೇಳಲು
ನಿನ್ನೊಂದಿಗೆ ಬೆರೆತಾಗಲೇ ನಾನಾಗುವೆ
ನೀನಿಲ್ಲದೆ, ನೀನಿಲ್ಲದೆ
ನಾ ಯಾರೆಂಬುದನ್ನೇ ಮರೆತೋಗುವೆ

ಸಮೀಪ ಬರೋದೇ
ಅದೇನೋ ವಿಶೇಷ
ಇದೋ ಜೀವದಲ್ಲಿ
ಈ ಪ್ರೀತಿ ಪ್ರವೇಶ
ಅದೇಕೋ, ಅದೇಕೋ
ಇದೇ ಹುಚ್ಚು ಗೀಳಾಗಿದೆ
ನೀ ನಕ್ಕಾಗ ತಾನೆ
ಅತೀವ ಸಂತೋಷ
ಸಮಾಚಾರ ನೂರು
ಹೇಳೋದು ಸಲೀಸಾ
ನಿಧಾನ, ನಿಧಾನ
ನೀ ಕನಸಲ್ಲೂ ಸಿಗಬಾರದೇ

ದಿನಾಲೂ ಜಾದು ಮಾಡಿ ಹೋಗುವೆ
ಒಂದಾಗಿವೆ ಕಂಗಳು
ನೂರಾಸೆಯ ಹೇಳಲು
ನಿನ್ನೊಂದಿಗೆ ಬೆರೆತಾಗಲೇ ನಾನಾಗುವೆ
ನೀನಿಲ್ಲದೆ, ನೀನಿಲ್ಲದೆ
ನಾ ಯಾರೆಂಬುದನ್ನೇ ಮರೆತೋಗುವೆ

ನಿಂತಲ್ಲೇ ಜಾದು ಮಾಡು

ನಿಂತಲ್ಲೇ ಜಾದು ಮಾಡು

ಯಾರಿಗೂ ಕಾಣದೆ
ಕಣ್ಣಲ್ಲೇ ನೀನೂ ಹಾಡು
ನೋಡಿಯೂ ನೋಡದೆ
ನೀನಿರೆ ರಮ್ಯ ಕಾಲ
ಅಲ್ಲದೆ ಶೂನ್ಯವೆಲ್ಲ
ಯಾರೂ ಸಮನಾಗರು
ನಿನ್ನಂತೆ ಯಾರಿಹರು
ನೀನೆಲ್ಲೋ‌ ನಾನಲ್ಲೇ
ಓ ಜೀವ ಸಾತಿಯೇ
ನೀನೆಲ್ಲೋ‌ ನಾನಲ್ಲೇ 
ಓ ಜೀವ ಸಾತಿಯೇ
ನನ್ನನ್ನು ಉಳಿಸೋದು
ಈ ನಿನ್ನ ಪ್ರೀತಿಯೇ
ನೀನೆಲ್ಲೋ‌ ನಾನಲ್ಲೇ 
ಓ ಜೀವ ಸಾತಿಯೇ

ಹೃದಯ ನಿನಗಗಿ, ಗೆಳತಿ... ಹಾಯ್/..

ಬಿಡುಗಡೆಯನ್ನು‌ ಬಯಸುವುದಿಲ್ಲ
ನಾನು ನಿನ್ನಲ್ಲಿಯೇ ಬಂದಿತ
ಸಡಗರದಲ್ಲಿ ಮುಳುಗಿರುವಾಗ
ನಿನ್ನನೇ ಧ್ಯಾನಿಸೋ ಮೋಹಿತ
ಏನಿದೆ ಬಾಳಿನಲ್ಲಿ
ಪ್ರೀತಿಗೂ ಮುಖ್ಯವಿಲ್ಲಿ
ಯಾರೂ ಸಮನಾಗರು
ನಿನ್ನಂತೆ ಯಾರಿಹರು
ನೀನೆಲ್ಲೋ‌ ನಾನಲ್ಲೇ 
ಓ ಜೀವ ಸಾತಿಯೇ
ನೀನೆಲ್ಲೋ‌ ನಾನಲ್ಲೇ 
ಓ ಜೀವ ಸಾತಿಯೇ
ನನ್ನನ್ನು ಉಳಿಸೋದು
ಈ ನಿನ್ನ ಪ್ರೀತಿಯೇ
ನೀನೆಲ್ಲೋ‌ ನಾನಲ್ಲೇ 
ಓ ಜೀವ ಸಾತಿಯೇ

ಓ ಸಿತಾ

ಓ ಸಿತಾ

ಮಧುರಮಯ ಸಂಗೀತ
ನಿನ್ನಿಂದ
ಸರಿಯುತಿದೆ ಏಕಾಂತ
ಒಂದೇ ದಾರಿ ನಮದಾಯಿತೀಗ
ಇನ್ನೂ ಮುಂದಕೆ ಸಾಗುತ
ಎಲ್ಲ ಎಲ್ಲೆ ದಾಟೋಣವೇನು
ಕಣ್ಣಿನಲ್ಲೇ ಮಾತಾಡುತ
ಮರೆಯದೆ ಬರೆಯುವೆ ಈ ಹೃದಯ
ಇನ್ನು ನಿನಗಂತ
ಹೇ ರಾಮ
ಉಸಿರುಣಿಸೋ ಪದನಾಮ
ನಿನಗೆಂದೇ
ಮುಡುಪಿಡುವೆ ಈ ಜನ್ಮ
ಎಲ್ಲೇ ಮೂಡಲಿ ನಿನ್ನ ನೆನಪು
ಅಲ್ಲೇ ಆಗಲಿ ಸಂಗಮ
ಏನೇ ಆದರೂ ಬಾಳಿನಲ್ಲಿ
ನಮ್ಮ ಪ್ರೀತಿಯೇ ಅಂತಿಮ
ಒರಗುವೆ ತೋಳಲಿ ನಮಗಿಲ್ಲ 
ಯಾವುದೇ ನೇಮ... 

ನಿನೇ ನಿನಗಿಂತ ಸುಂದರ
ನೆನ್ನೆಗಿಂತಲೂ ಈ ದಿನ
ಮೇಘವೂ ಇದನೇ ಹೇಳಿದೆ
ಮರಳಿ ಹನಿಗಳ ದನಿಯಲಿ
ನೀನು ಗೀಚೋ ಪ್ರಾಸ ಗೀತೆ ನಾನು
ಹಾಡಿ ಹೋಗು ಪೂರ್ತಿಯಾಗಿ ನೀನು
ವೇಳೆ ಆದರೂ ನಡೆಯುವೆ
ನೀನು ಚಲಿಸುವ ವೇಗಕೆ
ಕೂಡಿ ಕಳೆಯಲು ನಂತರ ಉಳಿದಷ್ಟೇ
ಪ್ರೀತಿ ಉಳಿತಾಯ.. 

ದೂರವಾದಾಗ ಕಾಡುವ
ನಲ್ಮೆ ದೂರಿದೆ ನಿನ್ನೆಡೆ
ನೀಡಲೇ  ತುಂಟ ನಗುವಿನ
ಸಣ್ಣ ಕುರುಹನು ಈಗಲೇ
ದಣಿವಾದಾಗ ಸೇವಿಸೊದೇ ನಿನ್ನ
ನೀಳವಾದ ಮೆಲ್ಲುಲಿಯನ್ನ
ಬೇಡ ನಿನ್ನನು ಎಟುಕದ
ಅಥವ ಮೀರಿದ ಬಂಧವು
ಬೇಕು ಕೋಡಲೇ ಈಗಲೇ ನೀನಷ್ಟೇ
ಅನ್ನೋ ಒತ್ತಾಯ! 

ಜೀವ ಸಖಿ

ಜೀವ ಸಖಿ

ಜೀವ ಸಖಿ
ಸುಡಬೇಡ ಹೀಗೆ
ನಿನ್ನ ಕಾಂತಿಯಲ್ಲಿ
ನಾ ಮೇಣವಾಗಿ
ಕರಗುತ್ತಿಹೆ...

*ಕೊಡಲೇನು ಈಗ
ಈ ಜೀವವನ್ನೇ
ಒಲವಾದ ಮೇಲೆ
ಭಯವೆಲ್ಲಿದೆ*

ಹೇಳಬೇಡ ಎಲ್ಲವನ್ನೂ
ನೀ ಒಮ್ಮೆಲೆ ಕಣ್ಣಲ್ಲಿಯೇ
ಮಾತಿಗಿಂತ ಮೌನದಲ್ಲೇ
ಈ ಪರಿಚಯ.. ಹಾಯ್..
ಕಾಗದದ ಕದವ
ನೀ ಬಡಿದ ಹಾಗೆ
ಒಂದೊಂದು ಪದವೂ
ಕವಿಯಾಗಿದೆ...

ಬಾಜಿ ಕಟ್ಟಿದಂತೆ ಗೆಜ್ಜೆ
ಆ ನೆಲವನು ಆಕ್ರಮಿಸಿದೆ
ರಾಜಿ ಮಾಡಲೆಂದೇ ಪಾದ
ಕುಣಿದಂತಿದೆ.. ಹಾಯ್..
ನೀ ಉಳಿಸಿ ಹೋದ
ಗುರುತಲ್ಲಿ ತಾನೆ
ನೀರುಣಿಸುವಂಥ
ಹಿತವೊಂದಿದೆ...

ತಿಂಗಳನು ಸುರಿದು

ತಿಂಗಳನು ಸುರಿದು

ಚಂದಿರನು ಸರಿದು
ಕಣ್ತೆರೆದ ಇಳೆಗೆ ತಲ್ಲಣ
ನಿಂತು ಒಮ್ಮೆ
ನಿನ್ನ ಕಂಡು
ಮುಂದಕ್ಕೆ ಚಲಿಸಿತು ಈ ಕ್ಷಣ
ನಿಲ್ಲಿಸಲು ನಿಲ್ಲದೆ
ಬೀಸುತಿದೆ ತಂಗಾಳಿ
ನಿನ್ನ ಬಳಿ ಬರಲು ಕಾರಣ
ಅಂಕೆ ಮೀರಿ
ಹೋದ ಮನಕೆ
ನಿನ್ನ ನೆನಪೇ ಸಿಹಿ ಹೂರಣ
ಅತ್ತ ಹೋದರೆ ಇತ್ತಗೆ
ಇತ್ತ ಬಂದರೆ ಅತ್ತಗೆ
ಸುತ್ತ ಮುತ್ತಲು ನಿನ್ನದೇ ಹಾವಳಿ
ಕಾಲು ಕಿತ್ತರೂ ಮತ್ತದೇ
ಜಾಗದಲ್ಲಿಯೇ ಬೇರೂರಿ
ನಿಂತೆ ನಿನ್ನಲ್ಲೇ ನಿನ್ನಲ್ಲೇ ಮರಳಿ...

ಉತ್ಸುಕನಾಗುವೆ 
ನೀ ನಕ್ಕ ಕೂಡಲೇ...

ಬೇಸಿಗೆಲೂ ಮಳೆಯೇ
ಪ್ರೀತಿ ಪ್ರೀತಿ ಕಾರಣ
ಕಾಣೋದೆಲ್ಲ ಭ್ರಮೆಯೇ
ಪ್ರೀತಿ ಪ್ರೀತಿ ಕಾರಣ
ಎಲ್ಲೋ ಹೋಗಲು ಹೊಂಟವ
ಬೇರೆ ಎಲ್ಲಿಗೋ ಹೋಗುವೆ
ಏನೂ ತೋಚದು ತೋಚದು ಈ ದಿನ
ಬೇಕು ಅನ್ನಿಸೋದೆಲ್ಲವೂ
ಬೇಡ ಅಂತನಿಸುವುದು
ಏಕೋ ಹುಚ್ಚೆದ್ದು ಹೋಗಿದೆ ಈ ಮನ
ಉತ್ಸುಕನಾಗುವೆ 
ನೀ ನಕ್ಕ ಕೂಡಲೇ...

ಕಾರಂಜಿಯ ಹಾಗೆ

ಕಾರಂಜಿಯ ಹಾಗೆ

ಚಿಮ್ಮುತ್ತಿರು ಹೀಗೆ
ಎಂದೂ ಬಾಳಲಿ, ಓ ನನ್ನ ಸಂಗಾತಿಯೇ
ನಿನ್ನೊಂದಿಗೆ ಬಾಳೋ
ಒಂದೊಂದು ಕ್ಷಣವನ್ನೂ
ಕೂಡಿ ಇಡುವುದೇ, ದೈನಂದಿನ ಕೆಲಸವೇ
ಕಾರಣ ಕೇಳದೆ ಈ ಪ್ರೀತಿ ಸಾಗುತ್ತಿದೆ
ಹೊಂದಿಸುವೆ ನೋಡು ಈಗಲೇ
ನಿನ್ನ ಕನಸಿನೊಂದಿಗೆ
ನನ್ನ ಹೊಂಗನಸ ಝರಿಯನು
ಇನ್ನೂ ಚಂದಗಾಣಿಸಿ
ಸಂಧಿಸಲಿ ನಿನ್ನ ನೆರಳನು
ನನ್ನ ನೆರಳು ಮೆಲ್ಲಗೆ
ಮುಂಗುರುಳ ಮೀಟುವಂತೆಯೇ
ಕಾಡು ಇನ್ನೂ ಮೋಹಿಸಿ

ಚೂರು ಆಲಿಸೆಯಾ
ಹೃದಯವು ಕೂಗಿದೆ 
ಚೂರು ಆಲಿಸೆಯಾ
ಹೃದಯವು ಕೂಗಿದೆ  
ತೀರದ ಧ್ಯಾನವು ನಿನ್ನದೇ...
ಗಂಧವನು ತೇಯುವಂತೆಯೇ
ನನ್ನ ಸೋಕಿ ಹೋಗುವೆ
ಚಂದಿರನೂ ನಿನ್ನ ನೋಡುತ
ನಾಚಿಕೊಂಡ ಮರೆಯಲಿ
ಪಂಜರದಿ ಕೂಡಿ ಹಾಕಿದ
ಮಾತೇ ಬಾರದ ಗಿಣಿ
ನಿನ್ನ ಅಂದವನ್ನು ನೋಡುತ
ಮಾತು‌ ಕಲಿತ ಹಾಗಿದೆ...

ಕಾಣದೆ, ಕಂಗಾಲಾದಾಗಲೆಲ್ಲ

ಕಾಣದೆ, ಕಂಗಾಲಾದಾಗಲೆಲ್ಲ

ಕಣ್ಮುಚ್ಚಲು ನೀ ಎದುರಾಗುವೆ
ನಾ ಒಂಟಿ ಅನಿಸಿದಾಗಲೆಲ್ಲ
ನೆರಳಾಗಿ ನೀ ಹಾಜರಾಗುವೆ
ನೆರವಾಗುತ ಕಷ್ಟಕ್ಕೆ
ವರವಾಗುತ ಇಷ್ಟಕ್ಕೆ
ಅವಿರತ ಸಲಹುವಾಕೆ ನೀ ನನ್ನವ್ವ!

ಜೋಪಾನವಾಗಿ, ಕಾಪಾಡಿಕೊಂಡು
ಕನಸನ ಹೆಣೆವಂತೆ
ನನ್ನ ರೂಪಿಸಿದೆ
ಹೊತ್ತೊತ್ತಿಗೂ ಪ್ರೀತಿ ತುತ್ತಿಟ್ಟು
ಉಸಿರ ತುಂಬುತ್ತ
ಬದುಕ ಕಲಿಸಿದೆ

ನಿನ್ನ ಗರ್ಭದ ಹೂದೋಟದಲ್ಲಿ
ನಾ ಆಡಿ ಬೆಳೆದ ಚಿಟ್ಟೆ
ಬಾಹ್ಯ ಅಚ್ಚರಿಗಳ ನೀ
ಬೇಕಂತಲೇ ಬಚ್ಚಿಟ್ಟೆ?!

ಜಗವ ಕಾಣ ಬಂದ
ಆ ತೃಪ್ತ ಗಳಿಗೆಯಲಿ
ನಿನ್ನ ಮೊಗ ನೋಡಿ
ನೀನೇ ಬೆಳಕೆಂದೆ
ನಿನ್ನ ಬೆರಳನು ಹಿಡಿದು
ಅಳುವಾಗ ಖುಷಿಯಲಿ
ಎದೆಗಪ್ಪಿ ನನ್ನ ನೀ ಸಂಬಾಳಿಸಿದೆ
ನಾನಲ್ಲದೆ ಬೇರೆಲ್ಲೂ ಕಣ್ಣಾಡಿಸದೆ

ಬಾಳ ಪುಸ್ತಕದಲ್ಲಿ
ಎಂದೋ ಬರೆದ ಪದ್ಯ
ಅಮೂರ್ತವಾಗಿಯೇ ಉಳಿದಿತ್ತು
ಇಂದು ಮೂರ್ತ ರೂಪ
ನನ್ನ ಮುಂದೂಡಿದೆ
ನಿನ್ನ ಮಡಿಲಲಿ ತಾ
ಮಗುವಾಗ ಬಯಸಿದೆ

ಕಂಡಾಗ ಖುಷಿ, ಕಣ್ಣಲ್ಲೇ ಕಿಸಿ

ಕಂಡಾಗ ಖುಷಿ, ಕಣ್ಣಲ್ಲೇ ಕಿಸಿ

ಒಂದಿಷ್ಟು ಸಲುಗೆ ನೀಡದ
ಚಂದಿರ ಮೂಡಿದ ಮಿಂಚೋ ತಾರೆಗಳ ನಡುವಲ್ಲಿ ನೋಡು ಅಗೋ
ಬಿರ ಬಿರನೆ ನಡೆ
ಗುರಿ ತಲುಪಿಸುವ ಕಡೆ
ಹಿಡಿ ಇನ್ನಾದರೂ
ನೀ ನನ್ನ ನೆರಳನು
ಇನ್ನೇನೂ ಕೇಳದೆ

ಏನಾಗಿದೆ, ನನಗೇನೋ ಆಗಿದೆ

ಏನಾಗಿದೆ, ನನಗೇನೋ ಆಗಿದೆ

ಏನಾಗಿದೆ, ನನಗೇನೋ ಆಗಿದೆ
ಒಂಟಿತನ ಮರೆವಂತಾಗಿದೆ
ನಿನ್ನೊಂದಿಗೆ ನಡೆವಂತಾಗಿದೆ
ನಿಂತಲ್ಲಿಯೇ ಕುಣಿವಂತಾಗಿದೆ
ನೀ ಕಂಡರೆ ಖುಷಿ ಹೆಚ್ಚಾಗಿದೆ
ಏನಾಗಿದೆ, ನನಗೇನೋ ಆಗಿದೆ
ಏನಾಗಿದೆ, ನನಗೇನೋ ಆಗಿದೆ

ಜೀವ ಹಗುರಾಯ್ತು ಹೆಣ್ಣೆ ಹೆಣ್ಣೆ

ಜೀವ ಹಗುರಾಯ್ತು ಹೆಣ್ಣೆ ಹೆಣ್ಣೆ

ಹೀಗೆ ಇರಲಿಲ್ಲ ನೆನ್ನೆ ಮೊನ್ನೆ
ನೀನು ಎದುರಾಗೋ ಹೊತ್ತಿನಲ್ಲಿ
ಶ್ಯಾನೇ ಖುಷಿಯಲ್ಲಿ ಮಿಂದೆ ಹೆಣ್ಣೆ
ವಿಚಾರ ಹೀಗಿದೆ, ಮುಂದೇನೋ ಕಾಣೆ 
ನಿಧಾನ ಮಾಡುತ ಸಾಕಾಗಿದೆ

ಮನದ ಮರದ ಮರೆಯಲಿ
ದಿನವೂ ನಿನ್ನ ಹೆಸರದೇ
ಪುಳಕಗೊಳಿಸೋ ಚಿಲಿಪಿಲಿ
ನಾ ಹೇಗೆ ತಾಳಲಿ... 
ಜೀವ ಹಗುರಾಯ್ತು ಹೆಣ್ಣೆ ಹೆಣ್ಣೆ
ಹೀಗೆ ಇರಲಿಲ್ಲ ನೆನ್ನೆ ಮೊನ್ನೆ

ಅಂದವಾದ ಗೊಂಬೆ ನೀನು ಅನ್ನುವಾಗಲೇ
ಅಂದುಕೊಳ್ಳಲಾಗದಷ್ಟು ಮಿಂಚು ನನ್ನಲೇ
ಸಂಜೆ ಬಾನಿನಂತೆ ನಿನ್ನ ಕೆನ್ನೆ ತುಂಬಲೇ
ನೀನು ಹೇಳಿ ಕೊಟ್ಟ ಹಾಗೆ ನಾನು ಕುಣಿಯಲೇ
ನೂರು ಬಾರಿಯಾದರೂನು ನಿನ್ನ ನೆನೆಯಲಿಲ್ಲವಾದರೆ 
ಖಾಲಿ ಕುಳಿತು ಏನು ಯೋಗ ಅಂತನಿಸಿದೆ
ಹೇರಿ ಹೊಗು ಎಲ್ಲ ಆಸೆಯನ್ನು ನಾನೇ ಹೊತ್ತು ಮೆರೆಯುವೆ 
ಪ್ರೀತಿಯಲ್ಲಿ ಬೀಳಬೇಕು ಸದ್ದಿಲ್ಲದೆ

ಮನದ ಮರದ ಮರೆಯಲಿ
ದಿನವೂ ನಿನ್ನ ಹೆಸರಿದೇ
ಪುಳಕಗೊಳಿಸೋ ಚಿಲಿಪಿಲಿ
ನಾ ಹೇಗೆ ತಾಳಲಿ... 

ಮುಂಗೋಪ ಹೊರುವಾಗ ನೀನು 
ಕೈ ಕಟ್ಟಿ ನಾ ನಿಲ್ಲಲೇನು
ಸಲ್ಲಾಪ ನೀ ನಡೆಸೋವಾಗ
ನಾ ನಿನ್ನ ದನಿಯಾಗಲೇನು
ಆ ತೀರದಲ್ಲಿ ನಾ ಗೀಚಿ ಬಂದ
ಗುಟ್ಟಾದ ಸಾಲೊಂದ ಹೇಳೋಕಿದೆ
ನನ್ನಲ್ಲೇ ಉಳಿದ ನವಿರಾದ ರಾಗ
ಇನ್ನೇನು ಹಾಡೊಂದ ಹಾಡೋದಿದೆ
ಎರವಲು ಕೊಡು ನೀನು
ಮರೆಯದೆ ಕನಸನ್ನು
ಬರುವೆನು ನಾ ಸಜ್ಜಾಗಿ ನಿನಗಾಗಿಯೇ
ಎರವಲು ಕೊಡು ನೀನುss
ಮರೆಯದೆ ಕನಸನ್ನು
ಬರುವೆನು ನಾ ಸಜ್ಜಾಗಿ ನಿನಗಾಗಿ... 

ತಪ್ಪಿಸಿ ತಪ್ಪಿಸಿ ತುಟಿಯ ಒಪ್ಪಿಸು

ತಪ್ಪಿಸಿ ತಪ್ಪಿಸಿ ತುಟಿಯ ಒಪ್ಪಿಸು

ನಡುಕವ ಹಸ್ತಾಂತರಿಸುತಲಿ
ಎಲ್ಲವ ಹೇಳಲು ಸುಲಭವೇ ಅಲ್ಲ
ಕೇವಲ ಆಡುವ ಮಾತಿನಲಿ
ಬಿಡುಗಡೆಯಾಗಲಿ ಪೋಲಿ‌ ಕನಸು
ಇನ್ನು ಅದಕೆ ಸ್ಥಳವಿಲ್ಲ
ಇಂಪು ನೀಡುವ ರಾಗವೇ ಆಯಿತು
ಮೌನ ಮುರಿಯುವಾಗಲೆಲ್ಲ

ಒಂದೊಂದು ಅಲೆಗೂ

ಒಂದೊಂದು ಅಲೆಗೂ

ಒಂದೊಂದು ಹೆಸರ 
ಇಡಲೆಂದೇ ತೀರ ಕಾದಂತಿದೆ
ಹಿಂದೊಮ್ಮೆ ಪಡೆದ
ಹಸರನ್ನು ಅಲೆಯು
ಬೇಕಂತಲೇನೆ ಮರೆತಂತಿದೆ

ನೆನಪನ್ನೇ ತೊರೆದ
ಮರುಳಾದ ಕಡಲು
ಜೊತೆಗೆಂದು ಚಂದಿರನ ಕರೆತಂದಿದೆ

ಮೀನೊಂದು ತನ್ನ
ಮಿತಿಯನ್ನು ದಾಟಿ
ದಿಕ್ಕು ತೋಚದೆ ಅಲೆಯುತ್ತಿದೆ
ಬಲೆಗೆ ಸಿಕ್ಕರೆ 
ಸಿಗಬಹುದೋ ಏನೋ
ತನ್ನವರು ಎಂದು ತುಡಿಯುತ್ತಿದೆ
ಎಲ್ಲಿಂದಲೋ ತೇಲಿ
ಬಂದ ಎಲೆಯೊಂದು
ಮುಳುಗಡೆಯ ವೇಳೆಗೆ ಕಾಯುತ್ತಿದೆ
ಕಡಲಾಳದಲ್ಲಿ 
ತನಗಿಂತ ಯಾರು
ಸುಂದರ

ನಂದಗೋಕುಲದಲ್ಲಿ

ನಂದಗೋಕುಲದಲ್ಲಿ 

ಮಂದಹಾಸವ ಬೀರಿ
ಚಂದದಿ ನಲಿದಿರುವ ಗೋಪಾಲ
ಬೆಣ್ಣೆ ಗಡಿಗೆ ಕೆಡವಿ
ಉಂಡು ಎಲ್ಲವ ತಡವಿ
ಬಂಡರ ಬಂಡ ನೀನು ಶ್ರೀಲೋಲ
ಬಂದು ಹೋದವರೆಲ್ಲ
ಕೆನ್ನೆ ಗಿಂಡುವರಲ್ಲ
ಕದ್ದ ಕೈಯ್ಯಲಿ‌ ಸಿಕ್ಕರೆ ಅದೇ ಶಿಕ್ಷೆ
ಸಲಹು ಎಂದವರ 
ಮೊರೆಯ ಕೇಳುತಲೇ
ಎರಗಿ ನೀಡುವೆ ನೀ‌ ಶ್ರೀರಕ್ಷೆ

ಕೊಳಲ ಊದುತಲೇ
ಮಾಡುವೆ ಜೀವನ ಪಾಠವನು
ಕಡಲ ಆಳದ ಆ
ಮರ್ಮಗಳ ಬಲ್ಲವನು 
ಕಣ್ಣಲೆ ಹೆಣ್ಮನವ 
ಸೆಳೆಯುವುದೇ ನಿನ್ನ ಗುಣ
ದುಷ್ಟರ ಪಾಲಿಗೆ ನೀ
ದುಃಸ್ವಪ್ನ 

ಉಷೆಯ ನಶೆಗೆ ಬಾಯಾರಿದ ಇಳೆ

ಉಷೆಯ ನಶೆಗೆ ಬಾಯಾರಿದ ಇಳೆ

ಮಳೆಯು ಹೆಸೆದು ತೃಷೆ ನೀಗಿಸಿದೆ
ಬಾಯಿ ಬಿರಿದ ನೆಲದಲ್ಲಿ ಮತ್ತೆ
ಸಸಿಯೊಂದು ಬೆಸೆಯೆ ಕಾತರಿಸುತಿದೆ
ಸಂಜೆ ರಂಗು ತಮಗಲ್ಲವೆಂದ
ಸತ್ವ ರಹಿತ ಹೂ ಹೂವಿನಲೂ
ಮತ್ತೆ ಮೊಳಗಿದೆ‌ ಬಣ್ಣದೋಕುಳಿ
ಹಸಿರು ಸಹಿತ ಕುಪ್ಪಳಿಸುತಿದೆ...

ರಸ್ತೆ ರಸ್ತೆಯ ಕೂಡಿ ಹರಿದಿದೆ
ಸಿಕ್ಕ ಕಡೆಗೆ ಕುಡಿಯೊಡೆದಂತೆ
ಮತ್ತೆ ಎಲ್ಲಿಗೋ ಸಾಗಿ ನಿಂತರೂ
ಮುಂದುವರಿಸೋ ಉತ್ಸಾಹವಿದೋ
ಬಿತ್ತಿ ಚಿತ್ರ ಹೊಯ್ದಷ್ಟೂ ಕರಗಿ
ಪ್ರತ್ಯಕ್ಷವೇ ರೂಪಾಂತರ
ಮನೆ ಬಾಗಿಲ ಹುಡುಕಿ ಬಂದಿರೋ
ಪ್ಲಾಸ್ಟಿಕ್ ಚೀಲವೂ 

ನಿನ್ನ ಪ್ರೇಮವು ನನ್ನನು ಘಾಸಿ ಮಾಡಿ ಹೋಗಿದೆ

ನಿನ್ನ ಪ್ರೇಮವು ನನ್ನನು ಘಾಸಿ ಮಾಡಿ ಹೋಗಿದೆ

ಅದೇ ಹಳೆ ಕತೆಗೆ ಜೋತು ಬಿದ್ದಿದೆ ಮನ 
ಇಂದೇಕೋ ಮತ್ತೆ ನಿನ್ನ ಬೇಡಿದೆ 
ಹಾಡಾಗುವೆ ಅದೇನು ಅಂತ ಒಮ್ಮೆ ಕೇಳು
ನನ್ನೊಂದಿಗೆ ಇನ್ನೆಷ್ಟು ಮೋಸದಾಟ ಹೇಳು
ನೋವೊಂದಿದೆ ಅದಷ್ಟೇ ಸಾಕು ನನ್ನ ಪಾಲಿಗೆ
ಪ್ರೀತಿ ಅನ್ನೋದು
ಎಷ್ಟು ಹೀನಾಯ
ನೀನು ದೂರಾದೆ
ಮಾಡುತ ಗಾಯ
ಬೆಂದ ಎದೆಯಲ್ಲಿ
ಬೇಲಿಯ ಹಾಕಿ
ಸುಟ್ಟ ಗುರುತಲ್ಲಿ
ನೊಂದಿದೆ ಹೃದಯ

ಏಕಾಂತದಲ್ಲಿ ನೀ ಶಾಮೀಲಾಗು

ಏಕಾಂತದಲ್ಲಿ ನೀ ಶಾಮೀಲಾಗು 

ಏನಾದರೂ ಮಾತಾಡೆಯಾ
ನೀಗಿಸಿ ನನ್ನ ಭಯ
ನಾ ಯಾರಲಿ ಹೇಳಲಿ ನೋವನ್ನು
ಕಾಡುವೆ ಹೀಗೇತಕೆ
ಕಣ್ಣೀರಿನ ಹೋರಾಟಕೆ
ನೀ ಸೋಲದೆ ಹೋದರೆ ಮುಂದೇನು...

ಏಕಾಂತದಲ್ಲಿ ನೀ ಶಾಮೀಲಾಗು
ಏಕಾಂಗಿಯನ್ನು ನೀ ತಾಕಿ ಹೋಗು
ಹೇಳದೆ‌ ನೀ ಏಕೆ‌ ದೂರ ಹೋದೆ
ಬಾ ನೀಡು ಒಂದು ಕಾರಣ
ನಿಲ್ಲದಿರೋ ಈ ಯಾತನೆ 
ಆವರಿಸಿ ದಿಢೀರನೆ 
ಪ್ರತಿ ದಿನ ಇದೇ ಕತೆ ಸಾಗಿದೆ
ಆರಿದ‌ ಈ ದೀಪವು
ಕತ್ತಲೆಯ ಕಣ್ಣಾಗಿದೆ
ನೀ ಗೀರದೆ ಬೆಳಕಿಗೂ ಮೌನವೇ..

ಏನಾಗುತಿದೆ ನಂಗೇನೂ ತೋಚದೆ
ಈ ಥರ ಸುಡೋ ವೇಧನೆಯೇ
ಏರು ಪೇರು ಉಸಿರಾಟದಿ ನೀ
ಸೇರು ನನ್ನ...

ಎಂಟು ದಿಕ್ಕಿನಲ್ಲೂ ಎಲ್ಲೂ ಕಾಣದ ಅಂದ

 ಎಂಟು ದಿಕ್ಕಿನಲ್ಲೂ ಎಲ್ಲೂ ಕಾಣದ ಅಂದ

ನಿನ್ನಲ್ಲಿದೆ ಸಂಗಾತಿ
ತುಂಬ ಆಸೆಯಿಂದ ಹೇಳಬೇಕು ಗುಟ್ಟಾಗಿ
ಒಂದು ಸಣ್ಣ ಸಂಗತಿ
ಪ್ರೀತಿ ಮಾಡುವಂತೆ ಬೇಡಿದಾಗ ನೀ ನೀಡು 
ಮೌನದಲ್ಲೇ ಸಮ್ಮತಿ  
ಅಂಟಿಕೊಂಡ ಹಾಗೆ ಸಾಗು ನನ್ನ ಜೊತೆಯಲ್ಲೇ
ಇದ್ದು ಬಿಡು ಸೇವಂತಿ

ಕಣ್ಣಲ್ಲಿ ನೂರಾರು ಕನಸನ್ನು ಕೊರೆದಂತೆ 
ಏನೋ ಹೊಸ ಮಾಯೆ..

ಯಾವ ದೇವರೂರ ಪಾರಿಜಾತ ನೀ ಹೇಳು 
ಏನು ಚಂದ ಆ ನಗು 
ಎಲ್ಲ ದಾರಿ ನಿನ್ನ ಕೂಡಲೆಂದು ನಿಂತಂತೆ 
ನನ್ನ ದಾರಿ ನೀನಾಗು 
ನಿನ್ನ ಬಿಟ್ಟು ಬೇರೆ ಯಾವ ದನಿ ಬೇಕಿಲ್ಲ
ನನ್ನೊಳಗೆ ಮಿನುಗು 
ಸುತ್ತ ಮುತ್ತ ಯಾರು ಇಲ್ಲದಿರೋ ಹೊತ್ತಲ್ಲಿ 
ಚಲ್ಲಾಟಕೆ ಸಜ್ಜಾಗು 

ಕಣ್ಣಲ್ಲಿ ನೂರಾರು ಕನಸನ್ನು
ಕೊರೆದಂತೆ ಏನೋ ಹೊಸ ಮಾಯೆ..

ಕದ್ದು ಮುಚ್ಚಿ ನೋಡೋ ಆಸೆ ನಿನ್ನ ಸಂಗಾತಿ 
ಹಿಂಬಾಲಿಸಿ ಬರಲೇ 
ತುಂಬ ಪ್ರೀತಿಯಿಂದ ತಂದೆ ಒಂದು ಮಾತನ್ನು 
ಈಗಿಂದೀಗ ಹೇಳಲೇ 
ಎಲ್ಲೂ ಕೂಡ ಕಂಡೇ ಇಲ್ಲ 

ಕದ್ದು ಮುಚ್ಚಿ ನೋಡಬೇಡ ನನ್ನ ಸಂಗಾತಿ 
ಹುಚ್ಚನಾಗಿ ಹೋಗುವೆ 

ಕದ್ದು ಮುಚ್ಚಿ ನೋಡೋ ಆಸೆ ನಿನ್ನ ಸಂಗಾತಿ 
ಹಿಂಬಾಲಿಸಿ ಬರುವೆ 
ಏನೂ ತೋಚುತ್ತಿಲ್ಲ ನಿನ್ನ ಬಿಟ್ಟು ಈಗೀಗ 
ಮೂಕನಂತೆ ನಿಲ್ಲುವೆ 
ತುಂಬ ಆಸೆಯಿಂದ ತಂದೆ ಒಂದು ಮಾತನ್ನು 
ಪ್ರೀತಿಯಲ್ಲಿ ಹೇಳುವೆ 
ಏನು ಬೇಕು ಹೇಳು ಎಲ್ಲ ಒಂದೇ ಕ್ಷಣದಲ್ಲಿ 
ನಿನ್ನೆದುರು ಇಡುವೆ 

ನನ್ನಲ್ಲಿ ನೂರಾರು ಹೊಂಗನಸು ತಂದವಳು 
ನೀನೇ ಬರಿ ನೀನೇ.. 
ನೂರಾರು ಹೊಂಗನಸು ಮಿಂಚಾಗಿ ತಂದವಳು 
ನೀನೇ ಬರಿ ನೀನೇ.. 

ದೇವರೂರ ಪಾರಿಜಾತ ನೀನೇನಾ   
ಏನು ಚಂದ ಆ ನಗು 
ಎಲ್ಲ ದಾರಿ ನಿನ್ನ ಕೂಡಲೆಂದು ನಿಂತಂತೆ 
ನನ್ನ ದಾರಿ ನೀನಾಗು 

ನನ್ನಲ್ಲಿ ನೂರಾರು ಹೊಂಗನಸು ತಂದವಳು 
ನೀನೇ ಬರಿ ನೀನೇ.. 
ನೂರಾರು ಹೊಂಗನಸು ಮಿಂಚಾಗಿ ತಂದವಳು 
ನೀನೇ ಬರಿ ನೀನೇ.. 

ನನ್ನೆಲ್ಲ ಮಾತು ಬಚ್ಚಿ ಇಟ್ಟರೂ 
ದೋಚಿ ಹೋಗುವೆ 
ನಾ ಹೇಳೋ ಮೊದಲೇನೆ 
ಹಾಗೇ ಏನಾದರೂ  ಹೇಳು 
ಮನಸೇ ನೀನೇ ಬರಿ ನೀನೇ.. 

ನೂರಾರು ಹೊಂಗನಸು ತಂದವಳು 
ನೀನೇ ಬರಿ ನೀನೇ.. 
ನೂರಾರು ಹೊಂಗನಸು ಮಿಂಚಾಗಿ ತಂದವಳು 
ನೀನೇ ಬರಿ ನೀನೇ.. 

ಮುತ್ತು ಅಪೂರ್ವವಾಗಿಸಲೆಂದೆ

ಮುತ್ತು ಅಪೂರ್ವವಾಗಿಸಲೆಂದೆ 

ನೀ ಅಪೂರ್ಣವಾಗಿಸಿ ನಾಚಿ ಓಡಿದೆ 
ಪ್ರತಿ ಬಾರಿ ಇದೇ ಖುಷಿ,
ತಪ್ಪಿತೆಂದು ನಿನಗೆ 
ಬೇಡುವಂತೆ ನನಗೆ  

ಅಷ್ಟಕ್ಕೂ ಮುತ್ತು ಕೊಡುವುದಲ್ಲ 
ಹಂಚಿಕೊಳ್ಳುವುದು 
ನಿನ್ನಧರ ನನ್ನಧರ ಅರ್ಧರ್ಧ;
ಹತ್ತಿರವಾದಾಗ ಅಂತರ ಮೂಡಿದಷ್ಟೇ 
ಉಸಿರಾಟದ ಕೊರಗು 
ನಂತರ ಎಲ್ಲ ಸರಾಗ 

ಹಂಚಿಕೊಂಡ ಮೇಲೆ 
ಪಾಲು ನನಗೇ ಹೆಚ್ಚೆಂದೆ  
ಅಲ್ಲವೆಂದು ನೀನು;
ಎಲ್ಲವ ಶೂನ್ಯವಾಗಿಸಿ 
ಮತ್ತೆ ಹೊಸ ಲೆಕ್ಕ 
ನೀ ತಪ್ಪಿಸಿಕೊಂಡದ್ದು, ನಾ ಬೇಡಿದ್ದು.. 

ಇದಿಷ್ಟು ತುಟಿಗೆ ತುಟಿಯ ಲೆಕ್ಕ 
ಮಿಕ್ಕಿದ್ದು ನಗಣ್ಯವಾ? ಎಂದೇ ನೀ 
ಥಟ್ಟನೆ ಹೊಸ ಖಾತೆ ತೆರೆದೆ 
ಲೆಕ್ಕ ತಪ್ಪುತ್ತಲೇ ಹೋಯಿತು 

ಕಣ್ಣೊಳಗೆ ಕಣ್ಣಿಟ್ಟು 
ಹೂಡಿದ್ದೇ ಉಳಿತಾಯವೆಂದೆ ನಾ
"ಅದು ಹೇಗೆ?
ಮುತ್ತಿಡುವಾಗ ಕಣ್ಣು ಮುಚ್ಚಿತ್ತಲ್ಲ?" ಅಂದೆ  
ಅಸಲಿಗೆ ಇಬ್ಬರದ್ದೂ;
ಯಾರಿಗೆ ಯಾರೂ ಕಾಣದಂತೆ 
ನಮಗೆ ನಾವೇ ಕಂಡಂತೆ!

ಎಲ್ಲವನ್ನೂ ಪೋಣಿಸಿ 
ಬಿಗಿದು ಎತ್ತಿಡುವಾಗಲೆಲ್ಲ 
ಗಂಟು ಕಳಚಿ ನೆಲಕೆ ಸುರಿದು 
ಹೆಜ್ಜೆಯಡಿಗೆ ಚಕ್ರವಾಗಿ 
ಇಬ್ಬರನ್ನೂ ಮತ್ತೆ ಕೂಡಿಸಿ 
ಮುತ್ತು ಬೀರಿತ್ತು ಗತ್ತನು

ಮತ್ತಿನರಮನೆಯಲ್ಲಿ ನಿನ್ನ 
ಸೆರೆಯ ಮಾಡಿದ ನನ್ನ ಸೊಕ್ಕನು 
ಮುರಿದು ಓಡಿದೆ ಮತ್ತೆ ನೀ 
ಅಪೂರ್ಣವಾಗಿಸಿ ಮುತ್ತನು... 

ಮಳೆ ಸುರಿಯುವುದು ಕವಿತೆಯೇ

ಮಳೆ ಸುರಿಯುವುದು ಕವಿತೆಯೇ 

ಎಲೆ ಉದುರುವುದು ಕವಿತೆಯೇ 
ಇಳೆ ಅದನನುಭವಿಸುವುದು ಕವಿತೆಯೇ 
ಕಲೆ ಕಲಾವಿದನ ಕೈ ಸೇರುವುದೂ ಒಂದು ಕವಿತೆ 

ಓದುತಲೇ ಕುಳಿತಿರುವೆ ಮೂಡುವ ಸಾಲುಗಳನು 
ಪ್ರಾಸಾ

ಮಂಜು ಬಳಿದ ಗಾಜಿನ ಮೇಲೆ

ಮಂಜು ಬಳಿದ ಗಾಜಿನ ಮೇಲೆ 

ಪಂಜು ಹಿಡಿದ ಕಲಾವಿದ 
ಬಿಡಿಸಿದ ರೇಖಾಚಿತ್ರವು ಒಮ್ಮೆಲೇ 
ಜೀವವ ಪಡೆದುಕೊಂಡಿತ್ತು 
ಯಾರೂ ಈ ತನ ತನ್ನನು ಈ ಥರ 
ಬಿಡಿಸಿದ ಸಂಗತಿ ಉಲಿಯುತ್ತ  
ಕಲಾವಿದನ ಬಿಸಿ ಉಸಿರಿನ ದಾಳಿಗೆ 
ಕರಗುವ ಭೀತಿಗೆ ಸಿಲುಕಿತ್ತು 

ಎಲ್ಲರೂ ನಿರತರೇ ಇಲ್ಲಿ

ಎಲ್ಲರೂ ನಿರತರೇ ಇಲ್ಲಿ 

ಅವರವರ ಮಳಿಗೆಗಳಲ್ಲಿ 
ತಂದ ಸರಕನು ಮಾರಿ 
ಲಾಭ ಗಳಿಸುತಲಿ 

ಯಾರಿಗೆಷ್ಟಕೆ ಬಿಕರಿ 
ಮಾಡಬೇಕಿದೆ ಎಂಬ 
ಗಣಿತದಲಿ ಪರಿಣಿತರು 
ಹುಟ್ಟು ಗುಣದಂತೆ 

ಏನೋ ಕೊಳ್ಳಲು ಬಂದು 
ಮತ್ತೇನನೋ ಕೊಂಡು 
ಏಕೆ ಬಂದೆವೋ ಎಂದೇ 
ಮರೆತಂತೆ ಕೆಲವರು 

ಖಾಲಿ ಕಿಸೆಯನು ಹೊತ್ತು 
ಗೇಲಿ ಮಾಡಿಸಿಕೊಂಡು 
ನೀಳ ನಿದ್ದೆಯ ಹೊದ್ದು 
ಜಾರಿದವರೂ ಸಹಿತ 

ವಹಿವಾಟು ಬಲವಾಗಿ 
ಗರಿ ಸೂರು ಕಾಂಕ್ರೀಟು 
ಗಳಿಸಿದ್ದ ಕಾಯೋಕೆ
ದ್ವಾರ ಚಿಲಕವನಿಟ್ಟು 

ಕಟ್ಟಿದರು ಶ್ವಾನಗಳ 
ವಿದೇಶಿ ತಳಿಗಳ ತರಿಸಿ 
ಕಚ್ಚಲು ಖಂಡ ಖಂಡವೇ 
ಕಿತ್ತು ಬರುತಾವೆ 

ಸಂತೆ ಹಿಂದಿನಂತಿಲ್ಲ 
ಯಾರಿಗಾರೂ ಆಗುವುದಿಲ್ಲ 
ಬಿತ್ತಿದವರೇ ಎಲ್ಲ 
ಎಲ್ಲೆಲ್ಲೂ ವಿಷಬೀಜ  

ಯಾರ ಕಣ್ಣಲೂ ಈಗ 
ಬಣ್ಣಗಳು ಕಾಣವು 
ಲಾಲಸೆಯ ನಗುವಷ್ಟೇ 
ಮಾತು ಬೇವು!

ಆ ಬೆಟ್ಟದ ತುತ್ತ ತುದಿ

ಆ ಬೆಟ್ಟದ ತುತ್ತ ತುದಿ

ಅಲ್ಲಿಯ ಏಕಾಂತ
ತಣ್ಣಗೆ ಬೀಸೋ ಗಾಳಿಗೆ
ಸೋಲುವ ಧಾವಂತ
ಎಲ್ಲವೂ ಸರಿಯೇ ಮೇಲೆ
ರಕ್ಕಸನಿರುತಿದ್ದ
ನೆತ್ತರ ಹೀರುವ ಕೂಪದ
ನಕ್ಷೆಯ ಗೀಚಿದ್ದ

ಯಾರೂ ಊಹಿಸಲಾರದ
ಬೆಂಕಿಯ ಹುದುಗಿಟ್ಟು
ತನ್ನ ಈರ್ಷೆಯ ಜ್ವಾಲೆಗೆ
ಎಲ್ಲವನೂ ಸುಟ್ಟು
ಸೇಡಿನ ಸ್ವಾರ್ಥದ ಹಠದಲಿ
ಏನೆಲ್ಲಾ ಕಳೆದ
ತನಗಂಟಿದ ಮಸಿಯ
ನಂಬಿದವರಿಗೆಲ್ಲ ಬಳಿದ

ಎಲ್ಲರೂ ಎಣಿಸಿದ್ದರು
ಬೆಳ್ಳಗೆ, ಕುಳ್ಳಗೆ ಇವನು
ಪುಟ್ಟ ಮೀಸೆಯ ಹೊತ್ತು
ಏನನು ಸಾಧಿಸಿಯಾನು,
ಯಾರನು ಬೆದರಿಸಿಯಾನು,
ಆಗಲೇ ನಲುಗಿದ ದೇಶ
ಮತ್ತೆ ಕಟ್ಟುವನೇನು?
ಮತಿಗೇಡಿಯ ಮಾತಿಗೆ
ಮರುಳಾದರು ಕಡೆಗೆ

ತಾನಲ್ಲದೆ ಬೇರಿಲ್ಲ
ಎನ್ನುತ ನೆಗೆದವ ಕೊನೆಗೆ
ಬೇರು ಕಿತ್ತ ಮರವಾಗಿ
ನೆಲಕೆ ಅಪ್ಪಳಿಸಿದ
"ವಿಜ್ಞಾನವು ಅಜ್ಞಾನಿಯ
ಕೈವಶವಾದರೆ ಹೀಗೇ"
ಎನ್ನುವ ಸಂದೇಶ ಸಾರಿ
ಚರಿತ್ರೆಯ ಪುಟವಾದ

ಅಲ್ಲಿಯ ತನ ಜಗದೆಲ್ಲೆಡೆ
ಭುಜಬಲ ಮೆರೆದ
ತನ್ನ ನೆರೆ ಹೊರೆಯ ದೂರ್ತರ
ಮೂಢರ ಎಚ್ಚರಿಸಿದ
ದಬ್ಬಾಳಿಕೆಯಿಂದ ಸಿಗುವು-
-ದಾವುದೂ ಶಾಶ್ವತವಲ್ಲ
ಶಾಂತಿಯೊಂದೇ ಸೌಖ್ಯವೆಂಬ
ಕುರುಹು ಬಿಟ್ಟು ಹೋದ..

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...