ಎಲ್ಲರೂ ನಿರತರೇ ಇಲ್ಲಿ
ಅವರವರ ಮಳಿಗೆಗಳಲ್ಲಿ
ತಂದ ಸರಕನು ಮಾರಿ
ಲಾಭ ಗಳಿಸುತಲಿ
ಯಾರಿಗೆಷ್ಟಕೆ ಬಿಕರಿ
ಮಾಡಬೇಕಿದೆ ಎಂಬ
ಗಣಿತದಲಿ ಪರಿಣಿತರು
ಹುಟ್ಟು ಗುಣದಂತೆ
ಏನೋ ಕೊಳ್ಳಲು ಬಂದು
ಮತ್ತೇನನೋ ಕೊಂಡು
ಏಕೆ ಬಂದೆವೋ ಎಂದೇ
ಮರೆತಂತೆ ಕೆಲವರು
ಖಾಲಿ ಕಿಸೆಯನು ಹೊತ್ತು
ಗೇಲಿ ಮಾಡಿಸಿಕೊಂಡು
ನೀಳ ನಿದ್ದೆಯ ಹೊದ್ದು
ಜಾರಿದವರೂ ಸಹಿತ
ವಹಿವಾಟು ಬಲವಾಗಿ
ಗರಿ ಸೂರು ಕಾಂಕ್ರೀಟು
ಗಳಿಸಿದ್ದ ಕಾಯೋಕೆ
ದ್ವಾರ ಚಿಲಕವನಿಟ್ಟು
ಕಟ್ಟಿದರು ಶ್ವಾನಗಳ
ವಿದೇಶಿ ತಳಿಗಳ ತರಿಸಿ
ಕಚ್ಚಲು ಖಂಡ ಖಂಡವೇ
ಕಿತ್ತು ಬರುತಾವೆ
ಸಂತೆ ಹಿಂದಿನಂತಿಲ್ಲ
ಯಾರಿಗಾರೂ ಆಗುವುದಿಲ್ಲ
ಬಿತ್ತಿದವರೇ ಎಲ್ಲ
ಎಲ್ಲೆಲ್ಲೂ ವಿಷಬೀಜ
ಯಾರ ಕಣ್ಣಲೂ ಈಗ
ಬಣ್ಣಗಳು ಕಾಣವು
ಲಾಲಸೆಯ ನಗುವಷ್ಟೇ
ಮಾತು ಬೇವು!
No comments:
Post a Comment