Thursday, 15 December 2022

ಅಕ್ಷರಗಳ ಸಂತೆಯಲ್ಲಿ

ಅಕ್ಷರಗಳ ಸಂತೆಯಲ್ಲಿ 

ಪದವ ಮುಟ್ಟಿ, ತಟ್ಟಿ, ಎತ್ತಿ
ತೂಗಿ ಎದೆಗೆ ಇಳಿಸಿಕೊಂಡು 
ರಾಗವೆಂಬ ಬಣ್ಣದಲ್ಲಿ 
ನೂಲಿನಂತೆ ಅದ್ದಿ ತೆಗೆದು 
ಭಾವವೆಂಬ ಮೆರಗು ನೀಡಿ 
ಪಣಕೆ ಇಟ್ಟ ಹಾಗೆ 
ಜೀವವನ್ನೇ ತೇದು ಹೊಸೆಯುವೆ 

ಇಷ್ಟು ಸಾಲದಂತೆ ಝರಿಗೆ 
ಸಾಲು ಸಾಲು ತತ್ವ ತುಂಬಿ
ನಡುವಿನಲ್ಲಿ ಕಟ್ಟಿಕೊಂಡು 
ಕೊರಳ ಮಾಲೆ ಮಣಿಗಳಲ್ಲಿ 
ಅಲ್ಪ ಪ್ರಾಣ, ಮಹಾ ಪ್ರಾಣ
ಸತ್ವಪೂರ್ಣಗೊಳಿಸಿಕೊಂಡು 
ಮೋಡಿ ಮಾಡುವಾಟದಲ್ಲಿ 
ಗೆಜ್ಜೆ ಕಟ್ಟಿ ಕುಣಿಯುವೆ 

ಜೋಳಿಗೆಯೋ ಭರ್ತಿಯಾಗಿ  
ಹಾಡುಗಳು ಪೂರ್ತಿಯಾಗಿ 
ಕೇಳುಗರ ಪ್ರೀತಿಗಾಗಿ 
ಹಾಡೋ ದೇಸಿ ಸಂತನೇ 
ನಿನ್ನ ಜನ್ಮ ದಿನಕೆ ಇದೋ 
ನನ್ನ ಪದ್ಯದರ್ಪಣೆ... !

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...