ಕಾಣದೆ, ಕಂಗಾಲಾದಾಗಲೆಲ್ಲ
ಕಣ್ಮುಚ್ಚಲು ನೀ ಎದುರಾಗುವೆ
ನಾ ಒಂಟಿ ಅನಿಸಿದಾಗಲೆಲ್ಲ
ನೆರಳಾಗಿ ನೀ ಹಾಜರಾಗುವೆ
ನೆರವಾಗುತ ಕಷ್ಟಕ್ಕೆ
ವರವಾಗುತ ಇಷ್ಟಕ್ಕೆ
ಅವಿರತ ಸಲಹುವಾಕೆ ನೀ ನನ್ನವ್ವ!
ಜೋಪಾನವಾಗಿ, ಕಾಪಾಡಿಕೊಂಡು
ಕನಸನ ಹೆಣೆವಂತೆ
ನನ್ನ ರೂಪಿಸಿದೆ
ಹೊತ್ತೊತ್ತಿಗೂ ಪ್ರೀತಿ ತುತ್ತಿಟ್ಟು
ಉಸಿರ ತುಂಬುತ್ತ
ಬದುಕ ಕಲಿಸಿದೆ
ನಿನ್ನ ಗರ್ಭದ ಹೂದೋಟದಲ್ಲಿ
ನಾ ಆಡಿ ಬೆಳೆದ ಚಿಟ್ಟೆ
ಬಾಹ್ಯ ಅಚ್ಚರಿಗಳ ನೀ
ಬೇಕಂತಲೇ ಬಚ್ಚಿಟ್ಟೆ?!
ಜಗವ ಕಾಣ ಬಂದ
ಆ ತೃಪ್ತ ಗಳಿಗೆಯಲಿ
ನಿನ್ನ ಮೊಗ ನೋಡಿ
ನೀನೇ ಬೆಳಕೆಂದೆ
ನಿನ್ನ ಬೆರಳನು ಹಿಡಿದು
ಅಳುವಾಗ ಖುಷಿಯಲಿ
ಎದೆಗಪ್ಪಿ ನನ್ನ ನೀ ಸಂಬಾಳಿಸಿದೆ
ನಾನಲ್ಲದೆ ಬೇರೆಲ್ಲೂ ಕಣ್ಣಾಡಿಸದೆ
ಬಾಳ ಪುಸ್ತಕದಲ್ಲಿ
ಎಂದೋ ಬರೆದ ಪದ್ಯ
ಅಮೂರ್ತವಾಗಿಯೇ ಉಳಿದಿತ್ತು
ಇಂದು ಮೂರ್ತ ರೂಪ
ನನ್ನ ಮುಂದೂಡಿದೆ
ನಿನ್ನ ಮಡಿಲಲಿ ತಾ
ಮಗುವಾಗ ಬಯಸಿದೆ
No comments:
Post a Comment